ಅ.15ರವರೆಗೂ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ: ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್

Update: 2019-09-16 14:31 GMT

ಬೆಂಗಳೂರು, ಸೆ. 16: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಮಗ್ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಈಗಾಗಲೇ ಪ್ರಾರಂಭವಾಗಿದ್ದು, ಅ.15ರವರೆಗೆ ನಡೆಯಲಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ತಿಳಿಸಿದರು.

ಸೋಮವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಗ್ರ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯಕ್ರಮವು ನಾಗರಿಕರಿಂದ ಸ್ವಯಂ ಮತದಾರರ ಪಟ್ಟಿಯ ಪರೀಕ್ಷಣೆ ಸೇರಿದಂತೆ ವಿವಿಧ ವಿವರಗಳನ್ನು ಒಳಗೊಂಡಿರುತ್ತದೆ. ಆಯಾ ಮತಗಟ್ಟೆಯಲ್ಲಿ ಬಿಎಲ್‌ಓ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಮನೆ ಮನೆ ಸಂದರ್ಶನ ನಡೆಸಿ ಉಳಿದ ಮತದಾರರ ಪಟ್ಟಿಯ ವಿವರವನ್ನು ಸಂಗ್ರಹಿಸಲಿದ್ದಾರೆ ಎಂದು ಹೇಳಿದರು.

ಮತದಾರರ ಪಟ್ಟಿಯ ಸಂಬಂಧಪಟ್ಟಂತೆ ಎಲ್ಲಾ ರೀತಿಯ ನಮೂನೆಗಳು ಸೂಕ್ತ ವಿಲೇವಾರಿ ಮತ್ತು ಪಟ್ಟಿಯಲ್ಲಿರುವ ದೋಷಗಳನ್ನು ಸರಿಪಡಿಸಲು ಗುರಿ ಹೊಂದಲಾಗಿದೆ. 28 ವಿಧಾನಸಭಾ ಕ್ಷೇತ್ರಗಳಲ್ಲಿ 8,500 ಮತಗಟ್ಟೆಗಳಿವೆ. ಬೆಂಗಳೂರು ವ್ಯಾಪ್ತಿಯ 4 ಅಪಾರ ಜಿಲ್ಲಾ ಚುನಾವಣಾಧಿಕಾರಿ ವಿಧಾನಸಭಾ ಕ್ಷೇತ್ರದಲ್ಲಿ ಜನವರಿ 1ರಂದು ಪ್ರಕಟಿಸಿದ ಪಟ್ಟಿಯಲ್ಲಿ 91,00,207 ಮತದಾರರಿದ್ದಾರೆ. ಈ ಪೈಕಿ 47,42,091, ಪುರುಷ ಮತದಾರರು ಒಟ್ಟು 43,56,561 ಮಹಿಳೆ ಮತದಾರರಿದ್ದಾರೆ ಎಂದು ತಿಳಿಸಿದರು.

ವಿಶೇಷ ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯಕ್ರಮದ ಮೂಲಕ ಕುಟುಂಬದ ಎಲ್ಲ ಮತದಾರರನ್ನು ಒಂದೆಡೆಗೆ ತರಲಾಗುವುದು. ಮತದಾರರ ಪಟ್ಟಿಯಲ್ಲಿರುವ ಲಾಜಿಕಲ್ ದೋಷಗಳ ನಿವಾರಣೆ, ಫೋಟೋಗಳ ಸುಧಾರಣೆ, ಎಪಿಕ್ ಕಾರ್ಡ್‌ಗಳ ಏಕರೂಪತೆ ಹಾಗೂ ವಿಳಾಸ, ಮತಗಟ್ಟೆ ವಿಭಾಗ, ವಿಭಾಗ ಮತ್ತು ಮತಗಟ್ಟೆಗಳನ್ನು ಪ್ರಮಾಣ ಬದ್ಧಗೊಳಿಸಲಾಗುತ್ತದೆ ಎಂದು ವಿವರಿಸಿದರು.

ಅಲ್ಲದೆ, ಮತದಾರರ ಪಟ್ಟಿಗೆ ಸೇರದೆ ಇರುವವರನ್ನು ಸೇರಿಸಿಕೊಳ್ಳುವುದು. ಪಟ್ಟಿಯಿಂದ ವಲಸೆ ಹೋದ ಮತ್ತು ಮರಣ ಹೊಂದಿರುವವರ ವಿವರಗಳನ್ನು ತೆಗೆದು ಹಾಕುವುದು, ಹೊಸ ಮತದಾರರ ವಿವರಗಳನ್ನು ಸಂಗ್ರಹಿಸಲಾಗುವುದು. ಮತದಾರರ ಸಂಪರ್ಕ ವಿವರ ಮತ್ತು ಡಿಐಎಸ್ ಮೂಲಕ ಮಾಹಿತಿ ಸಂಗ್ರಹಿಸುವುದು ಮತದಾರರ ಪಟ್ಟಿಯ ಗುಣಮಟ್ಟವನ್ನು ಸುಧಾರಿಸಲಾಗುವುದು ಎಂದು ಹೇಳಿದರು.

ಮತದಾರರು ಭಾರತೀಯ ಪಾಸ್‌ಪೋರ್ಟ್, ಚಾಲನಾ ಪರವಾನಗಿ ಪತ್ರ, ಆಧಾರ ಪತ್ರ, ಪಡಿತರ ಚೀಟಿ, ಬ್ಯಾಂಕ್ ಪಾಸ್ ಬುಕ್, ಮತ್ತಿತರ ದಾಖಲೆಗಳನ್ನು ಸಲ್ಲಿಸಬೇಕು. ಬೆಂಗಳೂರು ಒನ್, ಕರ್ನಾಟಕ ಒನ್, ಸಾಮಾನ್ಯ ಸಭೆ ಕೇಂದ್ರ, ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ ತಮ್ಮ ದಾಖಲೆಗಳನ್ನು ಸಲ್ಲಿಸಬಹುದು. ಮತದಾರರು ತಮ್ಮ ಕುಟುಂಬದ ಮತದಾರರ ನೋಂದಣಿ ಮಾಹಿತಿಯನ್ನು ಮೊಬೈಲ್ ಮೂಲಕ ವೋಟರ್ ಸಹಾಯವಾಣಿ, ಮೊಬೈಲ್ ಆ್ಯಪ್, ಎನ್‌ಎಸ್‌ಪಿ, ಪೋರ್ಟಲ್‌ಗಳಿಗೆ ಲಾಗಿನ್ ಆಗಬಹುದು. 1950 ಮತದಾರರ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಇವಿಪಿ ಹಿನ್ನೆಲೆ

ಚುನಾವಣಾ ಆಯೋಗವು ಸಾರ್ವತ್ರಿಕ ಲೋಕಸಭಾ ಚುನಾವಣೆ- 2019ರ ಸಮಯದಲ್ಲಿ ಸಾರ್ವಜನಿಕರಿಂದ ಮತದಾರರ ಪಟ್ಟಿಯಲ್ಲಿನ ನ್ಯೂನತೆಗಳ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಮತದಾರರು ತಮ್ಮ ಮತದಾರರ ಮಾಹಿತಿಯನ್ನು ಖುದ್ದು ಪರಿಶೀಲಿಸಿಕೊಂಡು ತಮ್ಮ ವಿವರಗಳನ್ನು ಖಾತ್ರಿಪಡಿಸಿಕೊಳ್ಳಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ಮತದಾರರ ಪಟ್ಟಿಯ ಪರಿಶೀಲನಾ (ಇವಿಪಿ) ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ.

ವಿಶೇಷ ಮತದಾರರ ಪಟ್ಟಿಯ ಪರಿಶೀಲನಾ (ಇವಿಪಿ) ಕಾರ್ಯಕ್ರಮದ ಕುರಿತು ಮತದಾರರಲ್ಲಿ ಅರಿವು ಮೂಡಿಸುವುದು, ಪ್ರೇರಣೆ ನೀಡುವುದು ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಸಂಬಂಧಿತ ಮತದಾರರ ನೋಂದಣಿ ಅಧಿಕಾರಿಗಳಿಗೆ ರಾಜಕೀಯ ಪಕ್ಷಗಳು ಸಹಕರಿಸಬೇಕು.

-ಬಿ.ಎಚ್.ಅನಿಲ್ ಕುಮಾರ್, ಬಿಬಿಎಂಪಿ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News