ಐಟಿ ದಾಳಿ ಪ್ರಕರಣ: ಸೆ.17ರವರೆಗೆ ಡಿಕೆಶಿ, ಆಪ್ತರನ್ನು ಬಂಧಿಸದಂತೆ ಹೈಕೋರ್ಟ್ ಆದೇಶ

Update: 2019-09-16 14:42 GMT

ಬೆಂಗಳೂರು, ಸೆ.5: ಹೊಸದಿಲ್ಲಿಯ ನಿವಾಸಗಳ ಮೇಲಿನ ಐಟಿ ದಾಳಿ ಪ್ರಕರಣದಲ್ಲಿ ಸಮನ್ಸ್ ರದ್ದು ಕೋರಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸೇರಿ ಇತರ ಮೂವರು ಆಪ್ತರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಡಿಕೆಶಿ ಮತ್ತು ಆಪ್ತರನ್ನು ಸೆ.17ರವರೆಗೆ ಬಂಧಿಸದಂತೆ ಹೈಕೋರ್ಟ್ ಈಡಿಗೆ ಆದೇಶ ನೀಡಿದೆ.

ಈ ಕುರಿತು ಆರೋಪಿಗಳಾದ ಡಿಕೆಶಿ, ಸಚಿನ್ ನಾರಾಯಣ, ಸುನಿಲ್‌ಕುಮಾರ್ ಶರ್ಮ ಹಾಗೂ ಆಂಜನೇಯ ಹನುಮಂತಯ್ಯ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಪಿ.ಎಂ.ನವಾಝ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರು, ಮೇಲ್ಮನವಿ ವಿಚಾರಣೆ ಅಧಿಕಾರ ಹೈಕೋರ್ಟ್‌ಗೆ ಇದೆ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಸೆ.17ರಂದು ಮೇಲ್ಮನವಿ ಅರ್ಜಿ ವಿಭಾಗೀಯ ಪೀಠದ ಅಧಿಕಾರ ವ್ಯಾಪ್ತಿಗೆ ಬರುವ ಬಗ್ಗೆ ಆದೇಶ ಹೊರಡಿಸಲಾಗುವುದು. ಅಲ್ಲದೆ, ಆರೋಪಿಗಳನ್ನು ಸೆ.17ರವರೆಗೆ ಬಂಧಿಸದಂತೆ ಈಡಿಗೆ ಆದೇಶಿಸಿತು.

ಪ್ರಕರಣವೇನು: 2017ರ ಆ.2ರಂದು ಆದಾಯ ತೆರಿಗೆ(ಐಟಿ) ಅಧಿಕಾರಿಗಳು ಡಿಕೆಶಿ ಮತ್ತು ಆಪ್ತರ ಮನೆಗಳ ಮೇಲೆ ದಾಳಿ ಮಾಡಿ 8.59 ಕೋಟಿ ರೂ.ಮೊತ್ತವನ್ನು ಜಪ್ತಿ ಮಾಡಿದ್ದರು. ಡಿ.ಕೆ.ಶಿವಕುಮಾರ್, ಸಚಿನ್ ನಾರಾಯಣ, ಸುನಿಲ್‌ ಕುಮಾರ್ ಶರ್ಮ ಹಾಗೂ ಆಂಜನೇಯ ಹನುಮಂತಯ್ಯ ಸೇರಿ ಇತರರ ವಿರುದ್ಧ ಆದಾಯ ತೆರಿಗೆ ಕಾಯ್ದೆ-1961ರ ಕಲಂ 277 ಮತ್ತು 278 ಹಾಗೂ ಐಪಿಸಿ ಕಲಂ 120 ಬಿ, 193 ಹಾಗೂ 199 ಪ್ರಕಾರ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಈಡಿ ಜಾರಿಗೊಳಿಸಿದ್ದ ಸಮನ್ಸ್ ಅನ್ನು ರದ್ದುಗೊಳಿಸಬೇಕೆಂದು ಕೋರಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಗಳನ್ನು ನ್ಯಾಯಮೂರ್ತಿ ಅರವಿಂದಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾ ಮಾಡಿತ್ತು. ಮತ್ತೆ ಈಗ ಡಿಕೆಶಿ ಹಾಗೂ ಮೂವರು ಆಪ್ತರು ಈಡಿ ಅವರು ಬಂಧಿಸದಂತೆ ರಕ್ಷಣೆ ಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News