ಭೂ ವಿವಾದ: ಸುರಂಗ ಮಾರ್ಗ ಕಾಮಗಾರಿ ಸ್ಥಗಿತ

Update: 2019-09-16 14:46 GMT

ಬೆಂಗಳೂರು, ಸೆ.16: ಬಿಎಂಆರ್‌ಸಿಎಲ್ ಹಾಗೂ ರಕ್ಷಣಾ ಇಲಾಖೆಯ ನಡುವೆ ಭೂ ವಿವಾದದಿಂದಾಗಿ ನಮ್ಮ ಮೆಟ್ರೋ ಎರಡನೆ ಹಂತದಲ್ಲಿನ ಸುರಂಗ ಮಾರ್ಗ ಕಾಮಗಾರಿ ಸ್ಥಗಿತಗೊಂಡಿದೆ. ಎರಡೂ ಇಲಾಖೆಗಳ ನಡುವೆ ಭೂ ವಿವಾದ ತಲೆದೋರಿರುವ ಹಿನ್ನೆಲೆಯಲ್ಲಿ ವೆಲ್ಲಾರ್ ಜಂಕ್ಷನ್‌ನಲ್ಲಿ ನಡೆಯುತ್ತಿದ್ದ ಕೆಳಸೇತುವೆ ಕಾಮಗಾರಿ ಸ್ಥಗಿತಗೊಂಡಿದೆ. 

ಈ ಹಿಂದೆ ಕಬ್ಬನ್ ರಸ್ತೆ ಮೆಟ್ರೋ ನಿಲ್ದಾಣದ ಬಳಿ ಭೂಮಿಯ ಒಡೆತನಕ್ಕೆ ಸಂಬಂಧಿಸಿದಂತೆ ಇಲಾಖೆಗಳ ನಡುವೆ ತಿಕ್ಕಾಟ ನಡೆದಿತ್ತು. ಇದೀಗ ಎರಡನೆ ಹಂತದಲ್ಲಿಯೂ ರಕ್ಷಣಾ ಇಲಾಖೆ ಹಾಗೂ ಮೆಟ್ರೋ ನಿಗಮದ ನಡುವೆ ವಾದ-ವಿವಾದ ನಡೆಯುತ್ತಿದೆ.

ಏನಿದು ವಿವಾದ: ಗೊಟ್ಟಿಗೆರೆ-ನಾಗವಾರ ಮಾರ್ಗದಲ್ಲಿ ಮೆಟ್ರೋ ಸುರಂಗಮಾರ್ಗ ನಿರ್ಮಾಣ ಮಾಡಲಾಗುತ್ತಿದ್ದು, ವೆಲ್ಲಾರ ಜಂಕ್ಷನ್‌ನಲ್ಲಿ ನೆಲದಡಿ ನಿಲ್ದಾಣ ಕಾಮಗಾರಿ ನಡೆಸಲಾಗುತಿದೆ. ಅದಕ್ಕೆ ಸಂಬಂಧಿಸಿದಂತೆ 7,426 ಚದರ ಮೀ.ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಅದಕ್ಕೆ ಬದಲಾಗಿ ಭೂಮಿಯ ಮಾಲಕರು ಎಂದು ಹೇಳಿದ್ದ ಆಲ್‌ಸೇಂಟ್ ಚರ್ಚ್‌ಗೆ 60 ಕೋಟಿ ರೂ. ಪರಿಹಾರ ನೀಡಲಾಗಿದೆ.

ಇದೀಗ ರಕ್ಷಣಾ ಇಲಾಖೆ ಆ ಭೂಮಿ ತಮಗೆ ಸೇರಿದ್ದು, ಪರಿಹಾರವನ್ನು ನಮಗೆ ನೀಡಬೇಕು ಎಂದು ತಗಾದೆ ತೆಗೆದಿದೆ. ಅಲ್ಲದೆ, ಕಾಮಗಾರಿ ಸ್ಥಗಿತಕ್ಕೂ ಸೂಚನೆ ನೀಡಿದೆ. ಆ ಹಿನ್ನೆಲೆಯಲ್ಲಿ ಕಳೆದ ಐದಾರು ದಿನಗಳಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ವಿವಾದ ಬಗೆಹರಿಯುವವರೆಗೂ ಕಾಮಗಾರಿ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News