ಪತ್ರಕರ್ತರು ನ್ಯಾಯ ದೊರಕಿಸುವ ಕೆಲಸ ಮಾಡಬೇಕು: ಬೆಂಗಳೂರು ವಿವಿ ಕುಲಪತಿ ಪ್ರೊ.ವೇಣುಗೋಪಾಲ್

Update: 2019-09-16 15:51 GMT

ಬೆಂಗಳೂರು, ಸೆ.16: ಪತ್ರಕರ್ತರು ಸಮಸ್ಯೆಗಳಿಗೆ ಧ್ವನಿಯಾಗಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸುವ ಕೆಲಸ ಮಾಡಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸೋಮವಾರ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯುನ್ಮಾನ ವಿಭಾಗದ ಜ್ಞಾನಭಾರತಿ ಆವರಣದಲ್ಲಿ ಏರ್ಪಡಿಸಿದ್ದ ‘2019-20ನೇ ಶೈಕ್ಷಣಿಕ ವರ್ಷದ ವಿದ್ಯುನ್ಮಾನ ವಿದ್ಯಾರ್ಥಿಗಳಿಗೆ ಪೂರ್ವಸಿದ್ಧತೆ ಕಾರ್ಯಾಗಾರ’ದಲ್ಲಿ ಮಾತನಾಡಿದ ಅವರು, ಪತ್ರಕರ್ತರು ಪಾರದರ್ಶಕತೆ, ಸತ್ಯನಿಷ್ಠ ವರದಿ ಮಾಡಬೇಕು. ಹೀಗಾಗಿ, ಇತಿಹಾಸ ಗೊತ್ತಾಗದೇ ವಾಸ್ತವದ ವರದಿ ಮಾಡಲು ಅಸಾಧ್ಯ. ಗೂಗಲ್‌ನ್ನು ಅತಿಯಾಗಿ ನಂಬದೇ ಪುಸ್ತಕ, ದಿನಪತ್ರಿಕೆಗಳನ್ನು ಓದಬೇಕು. ಓದುವ ಮತ್ತು ಬರೆಯುವ ಹವ್ಯಾಸ ಇದ್ದವರು ಮಾತ್ರ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ಪತ್ರಕರ್ತ ಮಹದೇವ ಪ್ರಕಾಶ್ ಮಾತನಾಡಿ, ಮಾಧ್ಯಮ ಕ್ಷೇತ್ರದಲ್ಲಿ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮ, ಯೂಟ್ಯೂಬ್, ಡಿಜಿಟಲ್ ಮಾಧ್ಯಮ ಹೀಗೆ ಹಲವು ವಿಭಾಗಗಳಲ್ಲಿ ಉದ್ಯೋಗಾವಕಾಶಗಳಿದ್ದು, ವಿದ್ಯಾರ್ಥಿಗಳಿಗೆ ಪ್ರತಿಭೆ ಮತ್ತು ಸಾಮರ್ಥ್ಯವಿದ್ದರೆ ಓದುವ ಸಂದರ್ಭದಲ್ಲಿಯೇ ಕೆಲಸ ಸಿಗುತ್ತವೆ. ಆದ್ದರಿಂದ ತಂತ್ರಜ್ಞಾನದ ಜತೆಗೆ ಪುಸ್ತಕ ಓದುವ ಆಸಕ್ತಿ ಬೆಳಸಿಕೊಳ್ಳಬೇಕು. ಪ್ರತಿದಿನ ಒಂದು ಗಂಟೆಯಾದರೂ ದಿನಪತ್ರಿಕೆಗಳನ್ನು ಓದಿ ಮಹತ್ವದ ವಿಷಯಗಳನ್ನು ಬರೆದಿಟ್ಟು ಕೊಳ್ಳಬೇಕು. ಪತ್ರಕರ್ತರು ವ್ಯಕ್ತಿ ಮತ್ತು ಸಂಸ್ಥೆಯ ಪರವಾಗಿದೇ ಸತ್ಯದ ಪರವಾಗಿರಬೇಕು ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ (ಮರುವೌಲ್ಯಮಾಪನ) ಪ್ರೊ.ಬಿ.ಕೆ.ರವಿ ಮಾತನಾಡಿ, ಯುವಜನತೆ ಓದುವ ಹವ್ಯಾಸ ಕಳೆದುಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ತಂತ್ರಜ್ಞಾನ ಬೇಕು. ಆದರೆ, ಅನಿವಾರ್ಯವಲ್ಲ. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೇ ಬೆಂಗಳೂರು ವಿಶ್ವವಿದ್ಯಾಲಯ ನೀಡುವ ಸೌಲಭ್ಯ ಬಳಸಿಕೊಳ್ಳಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News