ದೇಶದಲ್ಲಿ ಆರ್ಥಿಕ ತಜ್ಞರಿಗೆ ಮುಕ್ತವಾದ ವಾತಾವರಣವಿಲ್ಲ: ಜಿ.ವಿ.ಸುಂದರ್

Update: 2019-09-16 15:54 GMT

ಬೆಂಗಳೂರು, ಸೆ. 16: ಕೇಂದ್ರ ಸರಕಾರ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದು, ದೇಶದಲ್ಲಿ ಆರ್ಥಿಕ ತಜ್ಞರಿಗೆ ಮುಕ್ತವಾದ ವಾತಾವರಣ ಕಲ್ಪಿಸುತ್ತಿಲ್ಲ ಎಂದು ಲೆಕ್ಕ ಪರಿಶೋಧಕ ಜಿ.ವಿ.ಸುಂದರ್ ವಿಷಾದ ವ್ಯಕ್ತಪಡಿಸಿದರು.

ಸೋಮವಾರ ನಗರದ ಶಾಸಕರ ಭವನದಲ್ಲಿ ಉದ್ಯೋಗಕ್ಕಾಗಿ ಯುವಜನರು ಆಯೋಜಿಸಿದ್ದ ‘ಉದ್ಯೋಗ ನಷ್ಟ ತಡೆದು, ಉದ್ಯೋಗ ಸೃಷ್ಟಿ’ ಕುರಿತಾದ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಆರ್ಥಿಕ ತಜ್ಞರ ಸಲಹೆಗಳಿಗೆ ಮನ್ನಣೆ ದೊರೆಯುತ್ತಿಲ್ಲ. ಈ ಹಿನ್ನೆಲೆ ಅನೇಕ ಆರ್ಥಿಕ ಸಲಹೆಗಾರರು ಸರಕಾರಿ ಸಂಸ್ಥೆಗಳಿಗೆ ರಾಜೀನಾಮೆ ನೀಡಿ ತಟಸ್ಥವಾಗಿದ್ದಾರೆ. ಇದಕ್ಕೆಲ್ಲ ಕೇಂದ್ರ ಸರಕಾರವೇ ಹೊಣೆ ಎಂದು ಹೇಳಿದರು.

ದೇಶದಲ್ಲಿ ಉತ್ಪಾದನೆಯಾದ ವಸ್ತುಗಳ ರಫ್ತು ಪ್ರಮಾಣ ಇಳಿಮುಖವಾದ ಕಾರಣ ನಿರುದ್ಯೋಗ ಸಂಖ್ಯೆ ಹೆಚ್ಚಾಗುತ್ತಿದೆ. ದೇಶದ ಆರ್ಥಿಕತೆ ಕುಸಿತಗೊಂಡು ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಿದೆ. ಕೈಗಾರಿಕೆ ಸಂಸ್ಥೆಗಳು ಉತ್ಪಾದನೆ ಕಡಿಮೆಯಾಗಿ ಕಾರ್ಮಿಕರನ್ನು ಕೆಲಸದಿಂದ ತೆಗೆಯುತ್ತಿದ್ದು, ಇದಕ್ಕೆ ಮುಖ್ಯ ಕಾರಣ ಉತ್ಪಾದನಾ ವಸ್ತುಗಳಲ್ಲಿ ಕುಗ್ಗಿರುವ ಬೇಡಿಕೆ ಎಂದು ತಿಳಿಸಿದರು.

ದೇಶದಲ್ಲಿ ಉತ್ಪಾದನೆಯಾಗುವ ಉಡುಪುಗಳು, ಯಂತ್ರೋಪಕರಣಗಳ ಬಿಡಿಭಾಗಗಳು, ವಾಹನ ಸೇರಿದಂತೆ ಅನೇಕ ವಸ್ತುಗಳ ಬೇಡಿಕೆ ಇಳಿಮುಖವಾಗಿ ಆರ್ಥಿಕ ಕುಸಿತದ ಜೊತೆಗೆ ನಿರುದ್ಯೋಗ ಉಂಟಾಗಿದೆ. ದೇಶದಲ್ಲಿ ಉತ್ಪಾದನೆಯಾಗುವ ಉಡುಪುಗಳನ್ನು ಹೊರದೇಶಗಳಿಗೆ 15-16ಲಕ್ಷ ಬಿಲಿಯನ್ ರಫ್ತು ಮಾಡಿದರೆ, ಬಾಂಗ್ಲಾದೇಶ 35ಲಕ್ಷ ಬಿಲಿಯನ್ ಉಡುಪುಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತದೆ. ರಫ್ತು ಪ್ರಮಾಣ ಕಡಿಮೆಯಾಗಿರುವ ಕಾರಣ ಕೈಗಾರಿಕೆ ಸಂಸ್ಥೆಗಳು ಉತ್ಪಾದನೆ ಪ್ರಮಾಣವನ್ನು ತಗ್ಗಿಸಿವೆ ಎಂದರು.

ಕೈಗಾರಿಕಾ ಸಂಸ್ಥೆಗಳು ಈ ಸ್ಥಿತಿ ಬರಲು ಜಿಎಸ್‌ಟಿ ಮತ್ತು ನೋಟ್‌ಬ್ಯಾನ್ ಕೂಡ ಕಾರಣ ಎಂದು ಕೆಲ ಆರ್ಥಿಕ ಸಂಸ್ಥೆಗಳು ಹೇಳುತ್ತಿವೆ. ದೇಶದಲ್ಲಿ ಯಾವುದೇ ಆರ್ಥಿಕ ಕುಸಿತಗೊಂಡಿಲ್ಲ ಎಂದು ಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ. ಅದನ್ನು ಮರೆಮಾಚಲು ಧರ್ಮ ಹಾಗೂ ಭಾಷೆ ಎಂಬ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ ಎಂದು ಕಿಡಿಕಾರಿದರು.

ಅಭಯ್ ಮಾತನಾಡಿ, ಸರಕಾರಗಳು ಕೃಷಿ ಚಟುವಟಿಕೆ ಮತ್ತು ಗ್ರಾಮೀಣ ಭಾಗದ ಅಭಿವೃದ್ಧಿ ಕಡೆಗೆ ಗಮನಹರಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗ ಸೃಷ್ಟಿ ಮಾಡಬೇಕು. ಆದರೆ, ಸದ್ಯದ ಸ್ಥಿತಿಯಲ್ಲಿ ಇರುವ ಉದ್ಯೋಗಗಳನ್ನು ಕಡಿತಗೊಳಿಸುತ್ತಿರುವುದು ನೋವಿನ ಸಂಗತಿ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ದಯನೀಯ ಸ್ಥಿತಿಯಲ್ಲಿವೆ. ಅದನ್ನೇ ನಂಬಿದ ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ. ಅವುಗಳನ್ನು ಪುನರಜ್ಜೀವನಗೊಳಿಸುವ ಮೂಲಕ ಉದ್ಯೋಗ ಸೃಷ್ಟಿಸಬೇಕಾಗಿದೆ ಎಂದು ಹೇಳಿದರು.

ಲಕ್ಷಕೋಟಿ ತೆರಿಗೆ ಹಣವನ್ನು ಕೇಂದ್ರ ಸರಕಾರ ಏನು ಮಾಡುತ್ತಿದೆ ಎಂದು ತಿಳಿಯುತ್ತಿಲ್ಲ. ಮುದ್ರಾ ಯೋಜನೆ ಯುವ ಜನತೆಗೆ ಸರಿಯಾಗಿ ತಲುಪುತ್ತಿಲ್ಲ.

-ಜಿ.ವಿ.ಸುಂದರ್, ಲೆಕ್ಕ ಪರಿಶೋಧಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News