ಪ್ರಶಸ್ತಿ ಗೆಲ್ಲುವತ್ತ ವಿಶ್ವ ಚಾಂಪಿಯನ್ ಸಿಂಧು ಚಿತ್ತ

Update: 2019-09-16 18:38 GMT

ಚಾಂಗ್‌ಝೌ(ಚೀನಾ), ಸೆ.16: ಚೀನಾ ಓಪನ್ ವರ್ಲ್ಡ್ ಟೂರ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಮೆಂಟ್ ಮಂಗಳವಾರ ಆರಂಭಗೊಳ್ಳಲಿದ್ದು, ವರ್ಲ್ಡ್ ಚಾಂಪಿಯನ್ ಪಿ.ವಿ.ಸಿಂಧು ಪ್ರಶಸ್ತಿ ಗೆಲ್ಲುವ ಕಡೆಗೆ ಗಮನ ಹರಿಸಿದ್ದಾರೆ.

ವಿಶ್ವದ ನಂ.5 ಸಿಂಧು ಕಳೆದ ತಿಂಗಳು ಸ್ವಿಟ್‌ಸ್ರ್ ಲ್ಯಾಂಡ್‌ನ ಬಾಸೆಲ್‌ನಲ್ಲಿ ನಡೆದ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿಸುವ ಮೂಲಕ ಹಲವು ವರ್ಷಗಳ ಕನಸನ್ನು ನನಸಾಗಿಸಿದ್ದರು.

  ಸಿಂಧು ಸತತ ಮೂರನೇ ಬಾರಿ ಫೈನಲ್ ಪ್ರವೇಶಿಸುವ ಮೂಲಕ ಇತಿಹಾಸ ಬರೆದಿದ್ದರು. ಇಂಡೋನೇಶ್ಯ ಓಪನ್ ಸೂಪರ್ 1000 ಇವೆಂಟ್‌ನಲ್ಲಿ ಸಿಂಧು ಫೈನಲ್ ತಲುಪಿದ್ದರು. ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಬಳಿಕ ಸಿಂಧು ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು. ತಮಗೆ ದೊರೆತ ಅಭಿನಂದನೆ , ಸನ್ಮಾನವನ್ನು ಮುಗಿಸಿ ಇದೀಗ ಚೀನಾ ಓಪನ್ ಟೂರ್ನಮೆಂಟ್‌ಗೆ ಸಜ್ಜಾಗಿದ್ದಾರೆ. 2016ರಲ್ಲಿ ಸಿಂಧು ಚೀನಾ ಮಾಸ್ಟರ್ಸ್‌ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದರು.

  24ರ ಹರೆಯದ ಸಿಂಧು ಚೀನಾ ಓಪನ್‌ನಲ್ಲಿ ಚೀನಾದ ಮಾಜಿ ಒಲಿಂಪಿಕ್ಸ್ ಚಾಂಪಿಯನ್ ಹಾಗೂ ವರ್ಲ್ಡ್ ನಂ.1 ಲೀ ಕ್ಸೂರಿಯಿ ಅವರನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿ ಸಲಿದ್ದಾರೆ. ಅವರು ಈ ಮೊದಲು 2012ರಲ್ಲಿ ಚೀನಾ ಮಾಸ್ಟರ್ಸ್‌ನಲ್ಲಿ ಒಲಿಂಪಿಕ್ಸ್ ಚಾಂಪಿಯನ್ ವಿರುದ್ಧ ಜಯ ಸಾಧಿಸಿದ್ದರು.

  ಸಿಂಧು ಅಂತರ್‌ರಾಷ್ಟ್ರೀಯ ಬ್ಯಾಡ್ಮಿಂಟನ್‌ನಲ್ಲಿ ಯಶಸ್ಸಿನ ತುತ್ತ ತುದಿಗೆ ಏರುತ್ತಿದ್ದಂತೆ ಲೀ ಅವರು ಗಾಯದ ಸಮಸ್ಯೆ ಎದುರಿಸತೊಡಗಿದರು. ರಿಯೋ ಒಲಿಂಪಿಕ್ಸ್‌ನಲ್ಲಿ ಸೋತು ನಿರ್ಗಮಿಸಿದರು. ರ್ಯಾಂಕಿಂಗ್‌ನಲ್ಲಿ ನಂ.20ನೇ ಸ್ಥಾನದಲ್ಲಿರುವ ಲೀ ಅವರು ಸಿಂಧು ವಿರುದ್ಧ 6 ಪಂದ್ಯಗಳನ್ನು ಆಡಿದ್ದಾರೆ. 3ರಲ್ಲಿ ಜಯ ಗಳಿಸಿದ್ದಾರೆ ಮತ್ತು 3ರಲ್ಲಿ ಸೋಲು ಅನುಭವಿಸಿದ್ದಾರೆ.

 ಸಿಂಧು ಇಂಡೋನೇಶ್ಯ ಓಪನ್‌ನಲ್ಲಿ ಲೀ ವಿರುದ್ಧ ಜಯ ಗಳಿಸಿದ್ದರು. ಒಂದು ವೇಳೆ ಸಿಂಧು ಮೊದಲ ಸುತ್ತಿನಲ್ಲಿ ಜಯ ಸಾಧಿಸಿದರೆ ಅವರಿಗೆ 2ನೇ ಸುತ್ತಿನಲ್ಲಿ ಕೆನಡಾದ ಮೈಕೆಲ್ ಲೀ ಸವಾಲು ಎದುರಾಗಲಿದೆ. ಇವರನ್ನು ಮಣಿಸಿ ಸಿಂಧು ಮುಂದುವರಿದರೆ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಮೂರನೇ ಶ್ರೇಯಾಂಕದ ಚೆನ್ ಯುಫೈ ಸವಾಲು ಎದುರಾಗಲಿದೆ. ವರ್ಲ್ಡ್ ನಂ.8 ಸೈನಾ ನೆಹ್ವಾಲ್ ಈ ವರ್ಷ ಇಂಡೋನೇಶ್ಯ ಮಾಸ್ಟರ್ಸ್‌ನಲ್ಲಿ ಜಯ ಗಳಿಸಿದ್ದರು. ಗಾಯದಿಂದ ಚೇತರಿಸಿಕೊಂಡ ಬಳಿಕ ಸಿಂಧು ಚೆನ್ನಾಗಿ ಆಡುತ್ತಿದ್ದಾರೆ. ಮಾಜಿ ನಂ.1 ಸೈನಾ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಮೂಡಿಸಿದ್ದರೂ ಎರಡನೇ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದರು. ಕಳಪೆ ಅಂಪೈರಿಂಗ್ ಸೋಲಿಗೆ ಕಾರಣ ಎಂದು ಸೈನಾ ದೂರಿದ್ದರು.

ಸೈನಾ ಚೀನಾ ಓಪನ್ ಮೊದಲ ಸುತ್ತಿನಲ್ಲಿ ಥಾಯ್ಲೆಂಡ್‌ನ ಬುಸಾನನ್ ವೊಂಗ್‌ಬಮ್ರುಂಗ್‌ಫಾನ್‌ರನ್ನು ಎದುರಿಸಲಿದ್ದಾರೆ. ಚೀನಾ ಓಪನ್‌ನಲ್ಲಿ ಇಬ್ಬರು ಸೂಪರ್ ಸ್ಟಾರ್‌ಗಳು ಗಾಯದಿಂದ ಚೇತರಿಸಿಕೊಂಡು ವಾಪಸಾಗಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News