ಮಂಕಾದ ಮೋಡಿ: ಆರು ತಿಂಗಳಲ್ಲಿ 4.5 ಬಿಲಿಯನ್ ಡಾಲರ್ ಮೊತ್ತದ ಭಾರತೀಯ ಷೇರುಗಳನ್ನು ಮಾರಾಟ ಮಾಡಿದ ವಿದೇಶಿ ಹೂಡಿಕೆದಾರರು

Update: 2019-09-17 05:34 GMT

ಮುಂಬೈ: ಜಾಗತಿಕ ಹೂಡಿಕೆದಾರರು ಭಾರತದ ಪ್ರಧಾನಿ ನರೇಂದ್ರ ಮೋದಿ ಮೇಲೆ ತಾವಿಟ್ಟಿದ್ದ ವಿಶ್ವಾಸವನ್ನು ಕಳೆದುಕೊಳ್ಳಲಾರಂಭಿಸಿದ್ದಾರೆ. ಭಾರತದ ಆರ್ಥಿಕ ಅಭಿವೃದ್ಧಿಯನ್ನು ಮೋದಿ ಸಾಧಿಸಿ ತೋರಿಸುತ್ತಾರೆಂಬ ನಿರೀಕ್ಷೆಯಲ್ಲಿ ಕಳೆದ ಆರು ವರ್ಷಗಳಿಂದ ಭಾರತೀಯ ಷೇರು ಮಾರುಕಟ್ಟೆಗೆ ಸುಮಾರು 45 ಬಿಲಿಯನ್ ಡಾಲರ್ ಸುರಿದಿದ್ದ ಜಾಗತಿಕ ಹೂಡಿಕೆದಾರರು ಈಗ ತಮ್ಮ ಹೂಡಿಕೆಗಳನ್ನು ವಾಪಸ್ ಪಡೆಯಲಾರಂಬಿಸಿದ್ದಾರೆ.  ಜೂನ್ ತಿಂಗಳಿನಿಂದ ಅವರು 4.5 ಬಿಲಿಯನ್ ಡಾಲರ್ ಮೊತ್ತದ ಭಾರತೀಯ ಷೇರುಗಳನ್ನು ಮಾರಾಟ ಮಾಡಿದ್ದಾರೆ. 1999ರ ನಂತರ ಮೊದಲ ಬಾರಿ ಇಷ್ಟೊಂದು ಭಾರೀ ಮೊತ್ತದ ಷೇರುಗಳನ್ನು ವಿದೇಶಿ ಬಂಡವಾಳದಾರರು ಮಾರಾಟ ಮಾಡಿದ್ದಾರೆ ಎಂದು theprint.in ವರದಿ ಮಾಡಿದೆ.

2014ಗಿಂತ ಮುಂಚೆ ಮೋದಿ ಸುತ್ತ ಇದ್ದ ಅತಿಯಾದ ನಿರೀಕ್ಷೆಯೆಲ್ಲ ಹುಸಿಯಾಗುತ್ತಿದೆ ಎಂದು ಲಂಡನ್ ಮೂಲದ ಲೊಂಬಾರ್ಡ್ ಒಡಿಯರ್ ಇನ್ವೆಸ್ಟ್‍ಮೆಂಟ್ ಮ್ಯಾನೇಜರ್ಸ್ ಸಂಸ್ಥೆಯ ಮುಖ್ಯ ಹೂಡಿಕೆ ತಂತ್ರಜ್ಞ ಸಲ್ಮಾನ್ ಅಹ್ಮದೆ ಹೇಳುತ್ತಾರೆ. ಈ ಬೆಳವಣಿಗೆಗೆ ಹೂಡಿಕೆದಾರರನ್ನು ದೂಷಿಸಲು ಸಾಧ್ಯವಿಲ್ಲ. ಭಾರತದ ಆರ್ಥಿಕ ಹಿಂಜರಿತ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದ್ದು ಜಿಡಿಪಿ ಪ್ರಮಾಣ ಕುಸಿತ ಕಂಡಿರುವ ಹೊರತಾಗಿ ಭಾರತದ ಆರ್ಥಿಕತೆ ಅಂಕಿಸಂಖ್ಯೆಗಿಂತಲೂ ಕೆಟ್ಟದ್ದಾಗಿದೆ ಎಂದು ಐಎಂಎಫ್ ಕೂಡ ಇತ್ತೀಚೆಗೆ ಹೇಳಿತ್ತು, ದೇಶದ ನಿರುದ್ಯೋಗ ಪ್ರಮಾಣ ಕಳೆದ 45 ವರ್ಷದಲ್ಲಿಯೇ ಗರಿಷ್ಠ್ಠವಾಗಿದ್ದು ಆಟೋಮೊಬೈಲ್ ಕ್ಷೇತ್ರವೂ  ಸಮಸ್ಯೆಯಲ್ಲಿದೆ.

ದೇಶದ ಅರ್ಥವ್ಯವಸ್ಥೆಯ ಸಮಸ್ಯೆಯನ್ನು ನೋಡಿ ಮೋದಿ ಸುಮ್ಮನೆ ಕುಳಿತಿಲ್ಲವಾದರೂ ಅವರು ಕ್ರಮ ಕೈಗೊಳ್ಳುವಲ್ಲಿ ನಿಧಾನಗತಿ ಅನುಸರಿಸುತ್ತಿದ್ದಾರೆಂಬ ಆರೋಪವಿದೆ. ಸಮಸ್ಯೆಗಳೆಲ್ಲವೂ 2016ರಲ್ಲಿ ಅಮಾನ್ಯೀಕರಣದಿಂದ ಆರಂಭಗೊಂಡು ನಂತರ ಜಿಎಸ್‍ಟಿ ಜಾರಿಯ ನಂತರ ಇನ್ನಷ್ಟು ಹೆಚ್ಚಾಗಿದೆ.

ಸರಕಾರ ಕ್ಷಿಪ್ರವಾಗಿ ಕಾರ್ಯಾಚರಿಸದೇ ಇದ್ದರೆ ಖಾಸಗಿ ರಂಗ ಇನ್ನಷ್ಟು ಸಮಸ್ಯೆಗೀಡಾಗುವ ಸಾಧ್ಯತೆಯಿದೆ ಎಂದು ಮೋರ್ಗನ್ ಸ್ಟೇನ್ಲಿ ಸಂಸ್ಥೆಯ ಅರ್ಥಶಾಸ್ತ್ರಜ್ಞೆ ಮೌಪಸ್ಸಂತ್ ಚಛ್ರ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News