ಅಫ್ಘಾನಿಸ್ತಾನ ಚುನಾವಣಾ ರ‍್ಯಾಲಿಯಲ್ಲಿ ಭಾರೀ ಸ್ಫೋಟ: 24 ಜನರ ಸಾವು

Update: 2019-09-17 11:43 GMT
Photo: Reuters

ಕಾಬೂಲ,ಸೆ.17: ಉತ್ತರ ಕಾಬೂಲಿನ ಪರ್ವಾನ್ ಪ್ರಾಂತ್ಯದ ರಾಜಧಾನಿ ಚರಿಕರ್‌ನಲ್ಲಿ ಮಂಗಳವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಸಮೀಪ ಭಾರೀ ಸ್ಫೋಟ ಸಂಭವಿಸಿದ್ದು,24 ಜನರು ಸಾವನ್ನಪ್ಪಿದ್ದಾರೆ ಮತ್ತು ಇತರ 31 ಜನರು ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಅಫಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಅವರು ಗಾಯಗೊಳ್ಳದೆ ಪಾರಾಗಿದ್ದಾರೆ.

ಘನಿ ಪ್ರಚಾರ ಸಭೆಯನ್ನುದ್ದೇಶಿಸಿ ಭಾಷಣ ಮಾಡುವುದಕ್ಕೆ ಮೊದಲೇ ಶಂಕಿತ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಹೆಚ್ಚಿನವರು ನಾಗರಿಕರಾಗಿದ್ದಾರೆ. ಘಟನಾ ಸ್ಥಳದಿಂದ ಆ್ಯಂಬುಲನ್ಸ್‌ಗಳ ಓಡಾಟ ನಡೆದೇ ಇದೆ. ಸಾವುನೋವುಗಳ ಸಂಖ್ಯೆ ಇನ್ನಷ್ಟು ಹೆಚ್ಚಬಹುದು ಎಂದು ಪ್ರಾಂತೀಯ ಆಸ್ಪತ್ರೆಯ ಮುಖ್ಯಸ್ಥ ಅಬ್ದುಲ್ ಕಾಸಿಂ ಸಂಗಿನ್ ತಿಳಿಸಿದರು.

ಆತ್ಮಹತ್ಯಾ ಬಾಂಬರ್‌ನೋರ್ವ ದಾಳಿಯನ್ನು ನಡೆಸಿದ್ದಾನೆ ಎಂದು ಸ್ಥಳೀಯ ಆಡಳಿತದ ಅಧಿಕಾರಿಯೋರ್ವರು ತಿಳಿಸಿದರು. ಯಾವುದೇ ಉಗ್ರವಾದಿ ಗುಂಪು ತಕ್ಷಣವೇ ಸ್ಫೋಟದ ಹೊಣೆಯನ್ನು ವಹಿಸಿಕೊಂಡಿಲ್ಲ.

ಪ್ರತ್ಯೇಕ ಘಟನೆಯಲ್ಲಿ ಕಾಬೂಲಿನ ಹೃದಯಭಾಗದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಮೂವರು ಕೊಲ್ಲಲ್ಪಟ್ಟಿದ್ದಾರೆ.

ಸೆ.28ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಜನರನ್ನು ಮತದಾನದಿಂದ ದೂರವಿರಿಸಲು ಅಫಘಾನ್ ಮತ್ತು ವಿದೇಶಿ ಪಡೆಗಳೊಂದಿಗೆ ಸಂಘರ್ಷಗಳನ್ನು ತಾಲಿಬಾನ್ ತೀವ್ರಗೊಳಿಸಿದೆ. ಎರಡನೇ ಬಾರಿಗೆ ಐದು ವರ್ಷಗಳ ಅವಧಿಗಾಗಿ ಘನಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.

ಚುನಾವಣಾ ಸಭೆಗಳು ಮತ್ತು ಮತಗಟ್ಟೆಗಳ ಮೇಲೆ ದಾಳಿ ನಡೆಸುವುದಾಗಿ ತಾಲಿಬಾನ್ ಬೆದರಿಕೆಯ ಹಿನ್ನೆಲೆಯಲ್ಲಿ ದೇಶಾದ್ಯಂತ ರ‍್ಯಾಲಿಗಳಿಗೆ ಭದ್ರತೆಯನ್ನು ಹೆಚ್ಚಿಸಿರುವ ನಡುವೆಯೇ ಈ ಸ್ಫೋಟಗಳು ಸಂಭವಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News