ಹಲವು ಪಕ್ಷಗಳ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಪ್ರಶ್ನಿಸಿದ ಅಮಿತ್ ಶಾ !

Update: 2019-09-17 11:00 GMT

ಹೊಸದಿಲ್ಲಿ:  ದೇಶದಲ್ಲಿ ಬಹು ಪಕ್ಷೀಯ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಿದೆಯೇ ಎಂಬ ಪ್ರಶ್ನೆಯನ್ನು ಎತ್ತುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತೆ ವಿವಾದವೊಂದನ್ನು ಸೃಷ್ಟಿಸಿದ್ದಾರೆ.

“ಬಹು ಪಕ್ಷೀಯ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ವಿಫಲವಾಗಿದೆಯೇ ಎಂಬ ಸಂಶಯ ದೇಶಕ್ಕೆ ಸ್ವಾತಂತ್ರ್ಯ ದೊರೆತ 70 ವರ್ಷಗಳ ನಂತರ ಜನರ ಮನಸ್ಸಿನಲ್ಲಿ ಮೂಡಿದೆ. ಅದು ನಮ್ಮ ಉದ್ದೇಶಗಳನ್ನು ಈಡೇರಿಸಬಹುದೇ ಎಂಬ ಪ್ರಶ್ನೆಯೂ ಇದೆ. ಅವರಿಗೆ ನಿರಾಸೆಯಾಗಿದೆ,'' ಎಂದು ಕಾರ್ಯಕ್ರಮವೊಂದರಲ್ಲಿ ನೀಡಿದ ಭಾಷಣದಲ್ಲಿ ಶಾ ಹೇಳಿದರು.

ದೇಶದ ಜನರಿಗೆ ಸಮಾನ ಹಕ್ಕುಗಳು ದೊರೆಯಲೆಂದು ಹಾಗೂ ಅವರು ಅಭಿವೃದ್ಧಿಗೊಳ್ಳುವ ಮೂಲಕ ದೇಶ ಅಭಿವೃದ್ಧಿಗೊಳ್ಳುವುದು ಎಂಬ ಉದ್ದೇಶದೊಂದಿಗೆ  ಜಗತ್ತಿನ ವಿವಿಧ ಇತರ ಪ್ರಜಾಪ್ರಭುತ್ವ ದೇಶಗಳ ವ್ಯವಸ್ಥೆಯನ್ನು ಅಧ್ಯಯನ ನಡೆಸಿ ಸಂವಿಧಾನ ರಚನಾಕಾರರು ಭಾರತದಲ್ಲಿ  ಬಹು ಪಕ್ಷೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೊಳಿಸಿದರು,'' ಎಂದು ಶಾ ಹೇಳಿದರು.

ಹಿಂದಿನ ಕಾಂಗ್ರೆಸ್ ಸರಕಾರದ ವಿರುದ್ಧ ಕಿಡಿ ಕಾರಿದ ಶಾ  ``ಅವರ ಆಡಳಿತಾವಧಿಯಲ್ಲಿ ಪ್ರತಿ ದಿನ ಭ್ರಷ್ಟಾಚಾರದ ಸುದ್ದಿಯಿತ್ತು, ಗಡಿ ಅಸುರಕ್ಷಿತವಾಗಿತ್ತು ಹಾಗೂ ಸೈನಿಕರ ಶಿರಚ್ಛೇಧನ ನಡೆಸಲಾಗುತ್ತಿತ್ತು, ಮಹಿಳೆಯರು ಅಸುರಕ್ಷತೆಯ ಭಾವನೆ ಹೊಂದಿದ್ದರು ಹಾಗೂ ಜನರು ಪ್ರತಿ ನಿತ್ಯ ಬೀದಿಗಳಲ್ಲಿ ಪ್ರತಿಭಟಿಸುತ್ತಿದ್ದರು. ಸರಕಾರ ಸಂಪೂರ್ಣ ನಿಷ್ಕ್ರಿಯವಾಗಿತ್ತು ಯಾವುದೇ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿರಲಿಲ್ಲ ಪ್ರತಿಯೊಬ್ಬ ಸಚಿವ ತನ್ನನ್ನು ಪ್ರಧಾನಿಯೆಂದು ಪರಿಗಣಿಸಿ ಪ್ರಧಾನಿಯನ್ನು ಪ್ರಧಾನಿಯೆಂಬಂತೆ ನೋಡಿರಲಿಲ್ಲ,'' ಎಂದರು.

ಹಿಂದಿನ ಸರಕಾರದಂತೆ ನರೇಂದ್ರ ಮೋದಿ ಸರಕಾರ ಯಾವುದೇ ನಿರ್ಧಾರವನ್ನು ಮತ ಬ್ಯಾಂಕ್ ಮೇಲೆ ಕಣ್ಣಿಟ್ಟು ತೆಗೆದುಕೊಳ್ಳದೆ ಜನರ ಪ್ರಯೋಜನಕ್ಕಾಗಿ ನಿರ್ಧಾರ ಕೈಗೊಂಡಿದೆ ಎಂದು ಶಾ ಹೇಳಿದರು.

``ಕೆಲ ಸರಕಾರಗಳು 30 ವರ್ಷ ಕೆಲಸ ಮಾಡಿ ಒಂದು ದೊಡ್ಡ ತೀರ್ಮಾನ ಕೈಗೊಳ್ಳುತ್ತವೆ. ಆದರೆ ನಮ್ಮ ಸರಕಾರ ಐದು ವರ್ಷ ಕೆಲಸ ಮಾಡಿ ಜಿಎಸ್‍ಟಿ, ಅಮಾನ್ಯೀಕರಣ, ವಾಯು ದಾಳಿ ಹೀಗೆ 50ಕ್ಕೂ ಹೆಚ್ಚು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ,'' ಎಂದು ಶಾ ಹೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News