ನಾಗರಿಕ ಸೇವೆ, ನಾಗರಿಕ ಪ್ರಜ್ಞೆ ಮತ್ತು ಸಾಂವಿಧಾನಿಕ ಕರ್ತವ್ಯ

Update: 2019-09-17 18:22 GMT

ನನ್ನ ಕರ್ತವ್ಯವನ್ನು ನಾನು ನನ್ನ ಬದ್ಧತೆಗೆ, ಶ್ರದ್ಧೆಗೆ ಮತ್ತು ವ್ಯಕ್ತಿಗತ ಸಾಂವಿಧಾನಿಕ ನಂಬಿಕೆಗಳನ್ನು ನಿಭಾಯಿಸಲು ಸಾಧ್ಯವಾಗದಿದ್ದಲ್ಲಿ ನಾನು ಅಧಿಕಾರದಲ್ಲಿ ಮುಂದುವರಿಯಬೇಕೋ? ಬೇಡವೋ? ಒಬ್ಬ ಚಾಲಕನ ಪ್ರಮಾದಕ್ಕೆ ತಮ್ಮನ್ನೇ ಹೊಣೆ ಮಾಡಿಕೊಂಡ ಲಾಲ್ ಬಹದ್ದೂರ್ ಶಾಸ್ತ್ರಿಯವರಂತೆಯೇ ಸಂಚಾಲಕನ ಪ್ರಮಾದಕ್ಕೆ ತಾವು ಹೊಣೆಯಾಗಬಾರದು ಎಂದು ಈ ಇಬ್ಬರು ಅಧಿಕಾರಿಗಳು ರಾಜೀನಾಮೆ ಸಲ್ಲಿಸಿದ್ದಾರೆ. ಇಲ್ಲಿ ಸಂಚಾಲಕ ಎಂದರೆ ಸಂವಿಧಾನ ಅಲ್ಲ ಸರಕಾರ ಎನ್ನುವ ಪ್ರಜ್ಞೆ ನಮ್ಮಲ್ಲಿದ್ದರೆ, ನಮ್ಮ ದೃಷ್ಟಿಯಲ್ಲಾದರೂ ಈ ಅಧಿಕಾರಿಗಳು ದೇಶದ್ರೋಹಿಗಳಾಗಿ ಕಾಣದೆ, ಭವಿಷ್ಯದ ಆಶಾಕಿರಣಗಳಾಗಿ ಕಾಣಲು ಸಾಧ್ಯ.


ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಲೋಯಾ ಅವರ ನಿಗೂಢ ಸಾವಿನ ನಂತರದಲ್ಲಿ ನಡೆದ ಕೆಲವು ಘಟನೆಗಳು ಮತ್ತು 2017ರಲ್ಲಿ ಸುಪ್ರೀಂಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳು ಬಹಿರಂಗವಾಗಿಯೇ ನ್ಯಾಯಾಂಗದ ಕೆಲವು ನಡವಳಿಕೆಗಳ ಬಗ್ಗೆ ತಮ್ಮ ಪ್ರತಿರೋಧ ವ್ಯಕ್ತಪಡಿಸಿದ ಪ್ರಸಂಗ, ಭಾರತದ ಪ್ರಜಾತಂತ್ರ ವ್ಯವಸ್ಥೆಯೊಳಗೆ ವ್ಯವಸ್ಥಿತವಾಗಿ ನುಸುಳುತ್ತಿದ್ದ ರೋಗದ ಸೂಚನೆಯಾಗಿತ್ತು ಎನ್ನುವುದನ್ನು ಇತ್ತೀಚಿನ ಕೆಲವು ಬೆಳವಣಿಗೆಗಳು ದೃಢಪಡಿಸಿವೆ. ಪ್ರಜಾತಂತ್ರ ವ್ಯವಸ್ಥೆ ಪ್ರಜೆಗಳಿಂದಲೇ, ಪ್ರಜೆಗಳಿಗಾಗಿಯೇ ಕಾರ್ಯನಿರ್ವಹಿಸಿದರೂ ಈ ವ್ಯವಸ್ಥೆಯನ್ನು ನಿರ್ವಹಿಸುವುದು ಸಾರ್ವತ್ರಿಕ ಮತದಾನದ ಮೂಲಕ ಆಯ್ಕೆಯಾದ ಜನಪ್ರತಿನಿಧಿಗಳ ಒಂದು ಗುಂಪು ಮಾತ್ರ. ಅಧಿಕಾರ ವಿಕೇಂದ್ರೀಕರಣವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ದಿಲ್ಲಿಯ ಸಂಸತ್ತಿನಿಂದ ಆದಿವಾಸಿ ಹಾಡಿಯ ಗ್ರಾಮಸಭೆಯವರೆಗೂ ಅಧಿಕಾರ ವಿತರಣೆಯನ್ನು ಕಾಣಬಹುದಾದರೂ, ಭಾರತದ ಸಂಸದೀಯ ವ್ಯವಸ್ಥೆ ಇಂದಿಗೂ ಪರಿಪೂರ್ಣ ಪ್ರಜಾಸತ್ತೆಯ ಮಾದರಿಯನ್ನು ಅನುಸರಿಸುತ್ತಿಲ್ಲ ಎನ್ನುವುದನ್ನೂ ಈ ಬೆಳವಣಿಗೆಗಳು ದೃಢಪಡಿಸುತ್ತವೆ.

 ಪ್ರಜಾತಂತ್ರ ವ್ಯವಸ್ಥೆಯ ಅಳಿವು ಉಳಿವು ಇರುವುದು ಸಂಸತ್ತಿನ ಉಭಯ ಸದನಗಳಲ್ಲೂ ಅಲ್ಲ ರಾಜ್ಯ ವಿಧಾನಸಭೆಯ ಸದನಗಳಲ್ಲೂ ಅಲ್ಲ ಅಥವಾ ಕುಗ್ರಾಮದ ಗ್ರಾಮಸಭೆಯ ಕಚೇರಿಯಲ್ಲೂ ಅಲ್ಲ. ಇವೆಲ್ಲವೂ ವ್ಯವಸ್ಥೆಯ ನಿರ್ವಹಣೆಗೆ ನಿರ್ಮಿಸಲಾಗಿರುವ ಸ್ಥಾವರಗಳಷ್ಟೆ. ಸಾರ್ವತ್ರಿಕ ಮತದಾನದ ಮೂಲಕ ಆಯ್ಕೆಯಾಗುವ ಜನಪ್ರತಿನಿಧಿಗಳು ಈ ಸ್ಥಾವರವನ್ನು ಸುರಕ್ಷಿತವಾಗಿ ಕಾಪಾಡುವ ಹೊಣೆ ಹೊತ್ತಿರುತ್ತಾರೆ. ಈ ಸುರಕ್ಷತಾ ಕಾರ್ಯಾಚರಣೆಯಲ್ಲಿ ಜನಪ್ರತಿನಿಧಿಗಳಿಗೆ ಜಂಗಮಸ್ವರೂಪಿ ಮೌಲ್ಯಗಳು, ಸಾಂವಿಧಾನಿಕ ನಿಯಮಗಳು, ಕಾಯ್ದೆ ಕಾನೂನುಗಳು ಮತ್ತು ಶಾಸನಗಳು ನೆರವಾಗುತ್ತಿರುತ್ತವೆ. ಈ ಮೌಲ್ಯಗಳನ್ನು ಉಲ್ಲಂಘಿಸುವ ಯಾವುದೇ ಜನಪ್ರತಿನಿಧಿಗೆ ಸಂಸತ್ತಿನ ಅಥವಾ ವಿಧಾನಸಭೆಯ ಮೆಟ್ಟಿಲು ತುಳಿಯುವ ನೈತಿಕ ಹಕ್ಕು ಇರುವುದಿಲ್ಲ. ಈ ಒಂದು ಪ್ರತಿಪಾದನೆಗೆ ಬದ್ಧವಾಗುವಂತಹ ಆಡಳಿತ ಯಂತ್ರವನ್ನು ನಾವು ಹೊಂದಿದ್ದೇವೆಯೇ ಎನ್ನುವ ಪ್ರಶ್ನೆಗೆ ದೊರೆಯಬಹುದಾದ ಉತ್ತರ ನಮ್ಮ ದೇಶದ ಪ್ರಜಾಸತ್ತೆಯ ಮುಖಲಕ್ಷಣವನ್ನೂ ಬಿಂಬಿಸುತ್ತದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಈ ಜಂಗಮ ಸ್ವರೂಪಿ ಲಿಖಿತ ಮೌಲ್ಯಗಳಿಗೆ ಮತ್ತು ಒಪ್ಪಿತ ನಿಯಮಗಳಿಗೆ ಬದ್ಧತೆಯನ್ನು ಆಳುವ ವರ್ಗಗಳು ತೋರುತ್ತಲೇ ಬಂದಿದ್ದರೂ, ಸಂವಿಧಾನದ ಚೌಕಟ್ಟಿನಲ್ಲೇ ಎಲ್ಲ ಪ್ರಜಾಸತ್ತಾತ್ಮಕ ಮೌಲ್ಯಗಳನ್ನೂ ಹಂತಹಂತವಾಗಿ ನಾಶಪಡಿಸುತ್ತಾ ಬಂದಿರುವುದನ್ನು 1975ರ ನಂತರದಲ್ಲಾದರೂ ಗಮನಿಸಬಹುದು. ಕಳೆದ ಎರಡು ದಶಕಗಳಲ್ಲಿ ಇದು ತೀವ್ರತೆ ಪಡೆದಿರುವುದು ವಾಸ್ತವ.

ಪ್ರಸ್ತುತ ಸಂದರ್ಭದಲ್ಲಿ ಇಬ್ಬರು ಪ್ರಾಮಾಣಿಕ ಐಎಎಸ್ ಅಧಿಕಾರಿಗಳು ರಾಜೀನಾಮೆ ನೀಡಿರುವ ಪ್ರಕರಣ ಈ ಚರ್ಚೆಗೆ ಮತ್ತೊಂದು ಆಯಾಮವನ್ನು ಒದಗಿಸಿದೆ. ದಾದ್ರಾ ಮತ್ತು ನಾಗರಹವೇಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಐಎಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಣ್ಣನ್ ಗೋಪಿನಾಥನ್, ಕಾಶ್ಮೀರದಲ್ಲಿ ಕೇಂದ್ರ ಸರಕಾರ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಂಡಿದೆ ಎಂದು ಆರೋಪಿಸಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಕೆಲವೇ ದಿನಗಳ ನಂತರ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಭಾರತದ ಬಹುತ್ವ ಸಂಸ್ಕೃತಿಗೆ ಧಕ್ಕೆ ಉಂಟುಮಾಡುವಂತಹ ಆಡಳಿತ ನೀತಿಯನ್ನು ಅನುರಿಸುತ್ತಿರುವ ಕೇಂದ್ರ ಸರಕಾರದ ಕ್ರಮಗಳನ್ನು ಧಿಕ್ಕರಿಸಿ ತಮ್ಮ ಹುದ್ದೆ ತ್ಯಜಿಸಿದ್ದಾರೆ. ಈ ವೇಳೆಗಾಗಲೇ ಇಬ್ಬರೂ ಪ್ರಾಮಾಣಿಕ ಅಧಿಕಾರಿಗಳ ಚಾರಿತ್ರ್ಯವಧೆಯ ಯೋಜನೆ ರೂಪುಗೊಂಡಿದ್ದು, ದೇಶವನ್ನು ತಮಗಿಂತಲೂ ಹೆಚ್ಚು ಪ್ರೀತಿಸುವ ನಾಯಕರು, ಅನುಯಾಯಿಗಳು ಈ ಅಧಿಕಾರಿಗಳ ದೇಶದ್ರೋಹದ ಪುರಾವೆಗಳನ್ನು ಶೋಧಿಸಲು ಆರಂಭಿಸಿದ್ದಾರೆ. ಇರಲಿ ವ್ಯವಸ್ಥೆಯ ಎದುರು ನಿಂತಾಗ ಇವೆಲ್ಲವೂ ಸಹಜ. 1975ರ ನೆನಪುಗಳು ಇನ್ನೂ ಮಾಸಿಲ್ಲ.

ಇಲ್ಲಿ ಪ್ರಶ್ನೆ ಉದ್ಭವಿಸಿರುವುದು ಸಾಂವಿಧಾನಿಕ ಕರ್ತವ್ಯದಲ್ಲಿ ನಿರತರಾಗಿರುವ ನಾಗರಿಕ ಸೇವೆಯ ಅಧಿಕಾರಿಗಳು ಈ ರೀತಿಯ ಕಾರಣಗಳಿಗಾಗಿ ರಾಜೀನಾಮೆ ನೀಡಬಹುದೇ ಎನ್ನುವುದು. ಬಹುಶಃ ಎರಡು-ಮೂರು ದಶಕಗಳ ಹಿಂದೆ ಈ ಪ್ರಸಂಗ ನಡೆದಿದ್ದರೆ ಈ ಪ್ರಶ್ನೆ ಉದ್ಭವಿಸುತ್ತಲೇ ಇರಲಿಲ್ಲ. ಏಕೆಂದರೆ ಆಗ ನಾಗರಿಕ ಸೇವಾ ಅಧಿಕಾರಿಗಳಿಗೆ ಒಂದು ನಿರ್ದಿಷ್ಟ ಮೌಲ್ಯಯುತ ಸ್ಥಾನಮಾನಗಳಿದ್ದವು. ಅವರು ನಾಗರಿಕರ ಅಂದರೆ ಪ್ರಜಾತಂತ್ರ ವ್ಯವಸ್ಥೆಯ ಪ್ರಭುಗಳ ಸೇವಕರೆಂದೇ ತಮ್ಮನ್ನು ಭಾವಿಸುತ್ತಿದ್ದರು. ತಮ್ಮ ನಿಷ್ಠೆ ಏನಿದ್ದರೂ ಜನಸಾಮಾನ್ಯರಿಗೆ ಮತ್ತು ಅವರ ಬದುಕನ್ನು ರೂಪಿಸುವ ಸಂವಿಧಾನ ಮತ್ತು ಸಾಂವಿಧಾನಿಕ ನಿಯಮಗಳಿಗೆ ಎಂಬ ಗ್ರಹಿಕೆ ಅವರಲ್ಲಿತ್ತು. ಆ ಕಾಲಘಟ್ಟದ ಅದೃಷ್ಟವೋ ಏನೋ ಮಾಧ್ಯಮಗಳೂ ಇದೇ ಅಭಿಪ್ರಾಯವನ್ನು ಹೊಂದಿದ್ದವು. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು, ನಾಗರಿಕ ಸೇವಾ ಅಧಿಕಾರಿಗಳಂತೆಯೇ ‘ಜನಸೇವೆಯೇ ಜನಾರ್ದನ ಸೇವೆ’ ಎಂಬ ನಾಣ್ಣುಡಿಗೆ ಬದ್ಧವಾಗಿದ್ದವು. ಹಾಗೆಯೇ ಆಡಳಿತಾರೂಢ ಸರಕಾರದ ತಪ್ಪುಗಳನ್ನು ಸರಿಪಡಿಸುವ ಹೊಣೆ ನಮ್ಮ ಮೇಲಿದೆ ಎಂಬ ಪರಿಜ್ಞಾನ ಮಾಧ್ಯಮಗಳಲ್ಲಿ ಕಾಣಬಹುದಿತ್ತು. ಈಗ ಎಲ್ಲವೂ ಇತಿಹಾಸ.

ಮತ್ತೊಮ್ಮೆ ಅದೇ ಪ್ರಶ್ನೆಗೆ ಬರೋಣ. ಸೆಂಥಿಲ್ ಮತ್ತು ಗೋಪಿನಾಥನ್ ತಮ್ಮ ವ್ಯಕ್ತಿಗತ ತಾತ್ವಿಕ ಮತ್ತು ಸೈದ್ಧಾಂತಿಕ ನಿಲುವುಗಳ ಕಾರಣ ನೀಡಿ ಸಾಂವಿಧಾನಿಕ ಹುದ್ದೆಗೆ ರಾಜೀನಾಮೆ ನೀಡಬಹುದೇ ? ಈ ಪ್ರಶ್ನೆ ಏಕೆ ಉದ್ಭವಿಸುತ್ತದೆ ಎಂದರೆ ನೈತಿಕ ಹೊಣೆಗಾರಿಕೆ ಹೊತ್ತು ರಾಜೀನಾಮೆ ನೀಡುವ ಪರಂಪರೆಗೆ ನಾವು ತಿಲಾಂಜಲಿ ನೀಡಿ ಕನಿಷ್ಠ 11 ವರ್ಷಗಳಾದರೂ ಆಗಿವೆ. 2008ರಲ್ಲಿ ಮುಂಬೈಯಲ್ಲಿ ಭಯೋತ್ಪಾದಕ ದಾಳಿ ನಡೆದ ಸಂದರ್ಭದಲ್ಲಿ ಆಗಿನ ಕೇಂದ್ರ ಗೃಹಸಚಿವ ಶಿವರಾಜ್ ಪಾಟೀಲ್, ಕೇಂದ್ರ ಭದ್ರತಾ ಸಲಹೆಗಾರರಾದ ಎಂ. ಕೆ. ನಾರಾಯಣನ್ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಆರ್. ಆರ್. ಪಾಟೀಲ್ ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಸ್ವತಂತ್ರ ಭಾರತದಲ್ಲಿ ಈ ಪರಂಪರೆಗೆ ನಾಂದಿ ಹಾಡಿದ್ದವರು ಲಾಲ್ ಬಹದ್ದೂರ್ ಶಾಸ್ತ್ರಿ. 1956ರಲ್ಲಿ ಕೇಂದ್ರ ರೈಲ್ವೆ ಸಚಿವರಾಗಿದ್ದ ಶಾಸ್ತ್ರಿ ತಮಿಳುನಾಡಿನ ಅರಿಯಲೂರಿನಲ್ಲಿ ರೈಲು ಅಪಘಾತ ಸಂಭವಿಸಿ 146 ಜನ ಮಡಿದ ಪ್ರಕರಣದ ನಂತರ, ತಾವೇ ರೈಲಿನ ಚಾಲಕರೇನೋ ಎನ್ನುವ ರೀತಿಯಲ್ಲಿ ಕೂಡಲೇ ರಾಜೀನಾಮೆ ಸಲ್ಲಿಸಿದ್ದರು.

2019ರ ಫೆಬ್ರವರಿಯಲ್ಲಿ ಪುಲ್ವಾಮ ದಾಳಿಯಲ್ಲಿ 60 ಯೋಧರು ಭಯೋತ್ಪಾದನೆಗೆ ಬಲಿಯಾದ ನಂತರ ಒಬ್ಬ ಪೊಲೀಸ್ ಪೇದೆಯೂ ರಾಜೀನಾಮೆ ಸಲ್ಲಿಸಲಿಲ್ಲ. ನಾವು ಎಷ್ಟು ದೂರ ಕ್ರಮಿಸಿದ್ದೇವೆ ಅಲ್ಲವೇ? ಪಕ್ಷ ರಾಜಕಾರಣ ಮತ್ತು ಪಕ್ಷ ನಿಷ್ಠೆಯನ್ನು ಬದಿಗಿಟ್ಟು ನೋಡಿದರೆ, ಇಂತಹ ನೂರಾರು ನಿದರ್ಶನಗಳು ನಮ್ಮೆದುರಿವೆ. ಶಾಸ್ತ್ರಿ ಇಂದಿಗೂ ನಮಗೆ ನಮ್ಮ ಆಳುವ ವರ್ಗಗಳಿಗೆ ಆದರ್ಶಪ್ರಾಯರೇ. ಆದರೆ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮಟ್ಟಕ್ಕೆ ಮಾತ್ರ. ಇನ್ನೇನು ಹೇಳಲು ಸಾಧ್ಯ. ಮತ್ತೊಮ್ಮೆ ಅದೇ ಪ್ರಶ್ನೆ. ಇಬ್ಬರು ಅಧಿಕಾರಿಗಳ ನಡೆ ಸರಿಯೇ? ಏಕೆ ಸರಿಯಲ್ಲ ಎಂಬ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಂಡರೆ ಬಹುಶಃ ಉತ್ತರ ಸಾಧ್ಯ. ಸರಕಾರಿ ಕಚೇರಿಗಳಲ್ಲಿ, ಬ್ಯಾಂಕ್, ವಿಮೆ, ವಿಧಾನಸೌಧ, ಶಿಕ್ಷಣ ಇಲಾಖೆ, ವಿಶ್ವವಿದ್ಯಾನಿಲಯ ಇತ್ಯಾದಿ, ಇತ್ಯಾದಿ... ಹೀಗೆ ಯಾವುದೇ ಇಲಾಖೆ ಇರಲಿ, ಕೆಲಸ ಮಾಡಿದವರಿಗೆ, ಈ ಅಧಿಕಾರಿಗಳಿಗೆ ಆಗಿರುವ ಅನುಭವವೇ ವಿಭಿನ್ನ ರೀತಿಯಲ್ಲಿ ಆಗಿರುತ್ತದೆ.

ಪ್ರಾಮಾಣಿಕತೆಗಾಗಿ, ಪಾರದರ್ಶಕತೆಗಾಗಿ, ಸ್ವಚ್ಛ ವ್ಯವಸ್ಥೆಗಾಗಿ, ಸ್ವಾಸ್ಥ್ಯ ಪರಿಸರಕ್ಕಾಗಿ, ನಿಷ್ಪಕ್ಷ ಧೋರಣೆಯಿಂದ, ಸಾರ್ವಜನಿಕ ಸೇವೆಗಾಗಿ ತಮ್ಮ ಸೇವೆಯನ್ನು ಮುಡಿಪಾಗಿಡಲು ಬಯಸುವ ಎಲ್ಲ ಸರಕಾರಿ, ಕೆಲವೊಮ್ಮೆ ಖಾಸಗಿಯೂ ಇರಬಹುದು, ನೌಕರರಿಗೂ, ಅಧಿಕಾರಿಗಳಿಗೂ ಇಂತಹ ಪರಿಸ್ಥಿತಿ ಎದುರಾಗಿರುತ್ತದೆ. ಆದರೆ ಜೀವನದ ಅನಿವಾರ್ಯತೆ, ಬದುಕುವ ಹಾದಿ ಅವರನ್ನು ಸೇವೆಯಲ್ಲಿ ಮುಂದುವರಿಯುವಂತೆ ಒತ್ತಡ ಹೇರಿರುತ್ತದೆ. ಕರ್ತವ್ಯ ಪ್ರಜ್ಞೆ ಎನ್ನುವ ಆದರ್ಶಕ್ಕೆ ಬಲಿಯಾಗಿ ಸ್ವಂತಿಕೆಯನ್ನು ಕಳೆದುಕೊಳ್ಳಲು ಯಾವುದೇ ಪ್ರಾಮಾಣಿಕ ವ್ಯಕ್ತಿ ಸಿದ್ಧನಿರುವುದಿಲ್ಲ. ಏಕೆಂದರೆ ಕರ್ತವ್ಯ ಪ್ರಜ್ಞೆ ಸಾಪೇಕ್ಷವಾದದ್ದು, ಹಾಲಿ ಆಡಳಿತ ವ್ಯವಸ್ಥೆಗೆ ಬದ್ಧವಾಗಿರಬೇಕಾಗುತ್ತದೆ. ಸೆಂಥಿಲ್ ಮತ್ತು ಗೋಪಿನಾಥನ್ ಈ ಸೂಕ್ಷ್ಮವನ್ನು ಹೊರಗೆಳೆದಿಟ್ಟಿದ್ದಾರೆ.

ಓರ್ವ ಐಎಎಸ್ ಅಥವಾ ಐಪಿಎಸ್ ಅಧಿಕಾರಿ ನಿಭಾಯಿಸುವ ಕರ್ತವ್ಯಗಳ ಬಗ್ಗೆ ಕೊಂಚ ತಿಳುವಳಿಕೆ ಇದ್ದರೂ ಸಹ ಅವರ ಒತ್ತಡಗಳನ್ನು ಗ್ರಹಿಸಬಹುದು. ಬದಲಾಗುತ್ತಲೇ ಇರುವ ಸರಕಾರ, ಸಚಿವರು, ಮೇಲಧಿಕಾರಿಗಳು, ಸ್ಥಳೀಯ ರಾಜಕೀಯ ನಾಯಕರು ಮತ್ತು ಸಾರ್ವಜನಿಕರು ಇಷ್ಟರ ನಡುವೆ ಕರ್ತವ್ಯ ನಿರ್ವಹಿಸಬೇಕಾದ ಈ ಅಧಿಕಾರಿಗಳಿಗೆ ನಿಷ್ಠೆ, ಬದ್ಧತೆ, ಶ್ರದ್ಧೆ ಎಂದರೆ ಸಾಂವಿಧಾನಿಕ ಮೌಲ್ಯಗಳಷ್ಟೇ ಪವಿತ್ರವಾದ ವಿದ್ಯಮಾನಗಳಾಗಿರಬೇಕು. ಆಗಿರುತ್ತದೆ. ಕೆಲವೊಮ್ಮೆ ಇರುವುದಿಲ್ಲ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ಸಾಂವಿಧಾನಿಕ ಮೌಲ್ಯಗಳೆಂದರೆ ಆಡಳಿತರೂಢ ಸರಕಾರಗಳು ಅನುಸರಿಸುವ ನೀತಿಗಳಲ್ಲ, ರೂಪಿಸುವ ಮಾರ್ಗಸೂಚಿಗಳಲ್ಲ, ಜಾರಿಗೊಳಿಸುವ ಯೋಜನೆಗಳಲ್ಲ, ಅನುಷ್ಠಾನ ಮಾಡುವ ಶಾಸನಗಳಲ್ಲ. ಇವೆಲ್ಲವನ್ನೂ ಮೀರಿ ಸಂವಿಧಾನ, ‘‘ಭಾರತದ ಪ್ರಜೆಗಳಾದ ನಾವು’’ ಎಂದು ಹೇಳುವ ಮೂಲಕ ಪ್ರಜೆಗಳಿಗೆ ಒಂದು ಮೌಲಿಕ ಚೌಕಟ್ಟನ್ನು ರೂಪಿಸಿದೆ. ಈ ಚೌಕಟ್ಟಿನಲ್ಲಿ ಮೂಲಭೂತ ಹಕ್ಕುಗಳು, ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ, ವ್ಯಕ್ತಿಗತ ನೈತಿಕತೆ, ಕರ್ತವ್ಯ ನಿಷ್ಠೆ ಇವೆಲ್ಲವೂ ಅಡಗಿರುತ್ತದೆ. ಇವರು ಆಸೀನರಾಗುವ ಅಧಿಕಾರ ಪೀಠ ಈ ಚೌಕಟ್ಟನ್ನು ಭಗ್ನಗೊಳಿಸುವ ಮಾರ್ಗವಾದರೆ, ಆಕರವಾದರೆ, ಅಸ್ತ್ರವಾದರೆ ಅಥವಾ ತಮ್ಮನ್ನು ನಿಯಂತ್ರಿಸುವ ಸೂತ್ರದ ನೂಲಿನಂತಾದರೆ, ಯಾವುದೇ ಪ್ರಜ್ಞಾವಂತ ಅಧಿಕಾರಿಗೆ ಅಲ್ಲಿ ಕುಳಿತುಕೊಳ್ಳುವುದು ಅಸಾಧ್ಯವಾಗುತ್ತದೆ. ಸೆಂಥಿಲ್ ಮತ್ತು ಗೋಪಿನಾಥನ್ ಇದನ್ನೇ ಹೇಳಿದ್ದಾರೆ.

ಈಗ ನಾವು, ಅಂದರೆ ‘‘ಭಾರತದ ಪ್ರಜೆಗಳಾದ ನಾವು’’ ಎಂದು ಹೇಳುತ್ತಾ ಸಂವಿಧಾನದ ಮುನ್ನುಡಿಯಲ್ಲೇ ಪ್ರತಿಷ್ಠಿತ ಸ್ಥಾನ ಪಡೆದಿರುವ ನಾವು, ನಾಗರಿಕ ಸೇವಾ ಅಧಿಕಾರಿಯ ಸ್ಥಾನದಲ್ಲಿ ನಮ್ಮನ್ನೇ ಕುಳ್ಳಿರಿಸಿ, ನಮ್ಮದೇ ಆದ ಪ್ರಶ್ನೆಯನ್ನು ಮುಂದಿಡೋಣ. ನಮ್ಮ ಸಾಂವಿಧಾನಿಕ ಕರ್ತವ್ಯ ನಿರ್ವಹಣೆಯ ಪರಿಸರದಲ್ಲಿ ಉಸಿರುಗಟ್ಟುವ ವಾತಾವರಣ ಇದ್ದರೆ, ಕತ್ತು ಹಿಸುಕುವ ವಾತಾವರಣ ಇದ್ದರೆ, ನಮ್ಮ ನಿರ್ಧಾರಗಳು ನಮ್ಮದೇ ಪ್ರಜೆಗಳ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವಂತಾದರೆ, ನಾವು ಅನುಸರಿಸುವ ಮಾರ್ಗಗಳು ನಮ್ಮನ್ನೇ ಅವಲಂಬಿಸುವ ಸಾರ್ವಭೌಮ ಪ್ರಜೆಗಳ ಎಲ್ಲ ಮಾರ್ಗಗಳಲ್ಲೂ ಕಂಟಕಗಳನ್ನು ತಂದೊಡ್ಡಿದರೆ, ನಾವು ಏನು ಮಾಡಬೇಕು? ಆಗ ಕರ್ತವ್ಯ ಪ್ರಜ್ಞೆ ಮುಖ್ಯವೋ ಸಾಂವಿಧಾನಿಕ ಬದ್ಧತೆ ಮುಖ್ಯವೋ ? ಇಲ್ಲಿ ಕರ್ತವ್ಯ ಪ್ರಜ್ಞೆ ಆಡಳಿತಾರೂಢ ಸರಕಾರಕ್ಕೆ ಸಂಬಂಧಿಸಿದ ಸಾಪೇಕ್ಷ ವಿದ್ಯಮಾನ. ಸಾಂವಿಧಾನಿಕ ಬದ್ಧತೆ ಶಾಶ್ವತವಾದ ಮನಸ್ಥಿತಿ ಅಥವಾ ಸ್ವಪ್ರಜ್ಞೆ. ಇವೆರಡರ ನಡುವೆ ನಮ್ಮ ಆಯ್ಕೆ ಏನಾಗಿರಬೇಕು? ಭ್ರಷ್ಟ , ಅಸಭ್ಯ ಶಾಖಾ ಪ್ರಬಂಧಕರ ನಡುವೆ ಕೆಲಸ ಮಾಡುವ ಸಂದರ್ಭದಲ್ಲಿ ನನಗೇ ಎಷ್ಟೋ ಬಾರಿ ಈ ಬ್ಯಾಂಕಿನಲ್ಲಿ ಏಕಿರಬೇಕು ಎಂಬ ಪ್ರಶ್ನೆ ಉದ್ಭವಿಸಿದೆ. ಜೀವನದ ಅನಿವಾರ್ಯ ಮುಂದುವರಿದಿದ್ದೆ ಎಂದಿಟ್ಟುಕೊಳ್ಳಿ. ಆದರೆ ಹಾಗೆಯೇ ಇರಬೇಕೆಂದೇನಿಲ್ಲ. ಒಬ್ಬ ಸೈನಿಕನಿಗೂ ಸರಕಾರದ ಕ್ರಮಗಳನ್ನು ಧಿಕ್ಕರಿಸುವ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ಈಗ ಈ ಹಕ್ಕುಗಳನ್ನು ಹಂತಹಂತವಾಗಿ ಕಿತ್ತುಕೊಳ್ಳಲಾಗುತ್ತಿದೆ.

ಸೆಂಥಿಲ್ ಮತ್ತು ಗೋಪಿನಾಥನ್ ಅವರ ಮುಂದಿರುವ ಸಮಸ್ಯೆ ಇದು. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮುಂದಿದ್ದ ನೈತಿಕತೆಯ ಪ್ರಶ್ನೆಯೇ ಈ ಅಧಿಕಾರಿಗಳ ಮುಂದೆಯೂ ಇದೆ. ನನ್ನ ಕರ್ತವ್ಯವನ್ನು ನಾನು ನನ್ನ ಬದ್ಧತೆಗೆ, ಶ್ರದ್ಧೆಗೆ ಮತ್ತು ವ್ಯಕ್ತಿಗತ ಸಾಂವಿಧಾನಿಕ ನಂಬಿಕೆಗಳನ್ನು ನಿಭಾಯಿಸಲು ಸಾಧ್ಯವಾಗದಿದ್ದಲ್ಲಿ ನಾನು ಅಧಿಕಾರದಲ್ಲಿ ಮುಂದುವರಿಯಬೇಕೋ? ಬೇಡವೋ? ಒಬ್ಬ ಚಾಲಕನ ಪ್ರಮಾದಕ್ಕೆ ತಮ್ಮನ್ನೇ ಹೊಣೆ ಮಾಡಿಕೊಂಡ ಲಾಲ್ ಬಹದ್ದೂರ್ ಶಾಸ್ತ್ರಿಯವರಂತೆಯೇ ಸಂಚಾಲಕನ ಪ್ರಮಾದಕ್ಕೆ ತಾವು ಹೊಣೆಯಾಗಬಾರದು ಎಂದು ಈ ಇಬ್ಬರು ಅಧಿಕಾರಿಗಳು ರಾಜೀನಾಮೆ ಸಲ್ಲಿಸಿದ್ದಾರೆ. ಇಲ್ಲಿ ಸಂಚಾಲಕ ಎಂದರೆ ಸಂವಿಧಾನ ಅಲ್ಲ ಸರಕಾರ ಎನ್ನುವ ಪ್ರಜ್ಞೆ ನಮ್ಮಲ್ಲಿದ್ದರೆ, ನಮ್ಮ ದೃಷ್ಟಿಯಲ್ಲಾದರೂ ಈ ಅಧಿಕಾರಿಗಳು ದೇಶದ್ರೋಹಿ ಗಳಾಗಿ ಕಾಣದೆ, ಭವಿಷ್ಯದ ಆಶಾಕಿರಣಗಳಾಗಿ ಕಾಣಲು ಸಾಧ್ಯ.

Writer - ನಾ. ದಿವಾಕರ

contributor

Editor - ನಾ. ದಿವಾಕರ

contributor

Similar News