ಕೊನೆಯ ಪಂದ್ಯ ಆಡಿದ 12 ವರ್ಷಗಳ ಬಳಿಕ ವಿದಾಯ ಹೇಳಿದ ಭಾರತೀಯ ಕ್ರಿಕೆಟಿಗ !

Update: 2019-09-18 12:55 GMT

ಹೊಸದಿಲ್ಲಿ, ಸೆ.18: ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ 12 ವರ್ಷಗಳ ನಂತರ, ಭಾರತದ ಮಾಜಿ ಕ್ರಿಕೆಟಿಗ ದಿನೇಶ್ ಮೊಂಗಿಯಾ ಅವರು ತಮ್ಮ 42 ನೇ ವಯಸ್ಸಿನಲ್ಲಿ ಮಂಗಳವಾರ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. 

ಮೊಂಗಿಯಾ ಕೊನೆಯ ಬಾರಿಗೆ 2007 ರಲ್ಲಿ ಢಾಕಾದಲ್ಲಿ ನಡೆದ ಏಕದಿನ ಪಂದ್ಯವನ್ನು ಆಡಿದ್ದರು. ಬಳಿಕ ಬಂಡಾಯ ಭಾರತೀಯ ಕ್ರಿಕೆಟ್ ಲೀಗ್ (ಐಸಿಎಲ್) ಗೆ ಸೇರ್ಪಡೆಗೊಂಡು ಬಿಸಿಸಿಐನಿಂದ ನಿಷೇಧಕ್ಕೊಳಗಾಗಿದ್ದರು. ಐಸಿಎಲ್‌ನಲ್ಲಿ ಭಾಗವಹಿಸಿದ್ದ ಎಲ್ಲ ಆಟಗಾರರ ನಿಷೇಧವನ್ನು ನಂತರ ಬಿಸಿಸಿಐ ತೆರವುಗೊಳಿಸಿತು ಆದರೆ ದಿನೇಶ್ ಮೊಂಗಿಯಾ ಅವರು ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆಂಬ ಕಾರಣಕ್ಕಾಗಿ ಮಂಡಳಿಯಿಂದ ಕ್ಲಿಯರೆನ್ಸ್ ಪಡೆಯದ ಏಕೈಕ ಆಟಗಾರ.

ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ನ್ಯೂಝಿಲೆಂಡ್ ನ ಮಾಜಿ ಕ್ರಿಕೆಟಿಗ ಲೌ ವಿನ್ಸೆಂಟ್ 2015 ರಲ್ಲಿ ಲಂಡನ್ ನ  ಸೌತ್‌ವಾರ್ಕ್ ಕ್ರೌನ್ ಕೋರ್ಟ್‌ನಲ್ಲಿ ನಡೆದ ವಿಚಾರಣೆಯ ವೇಳೆ ಮೊಂಗಿಯಾ ಮತ್ತು ಕಿವೀಸ್ ನ ಆಲ್‌ರೌಂಡರ್ ಕ್ರಿಸ್ ಕೈರ್ನ್ಸ್ ಹೆಸರು ಹೇಳಿದ್ದರು. ಆದರೆ ಐಸಿಎಲ್‌ನಲ್ಲಿ ಭ್ರಷ್ಟಾಚಾರದ ಭಾಗಿಯಾದ ಆರೋಪವನ್ನು ಮೊಂಗಿಯಾ ನಿರಾಕರಿಸಿದ್ದರು.

ಎಡಗೈ ಅಗ್ರಸರದಿಯ ಬ್ಯಾಟ್ಸ್ ಮನ್ ಹಾಗೂ ಸ್ಪಿನ್ನರ್ ಮೊಂಗಿಯಾ ಅವರು ಭಾರತದ 2003 ರ ವಿಶ್ವಕಪ್ ತಂಡದ ಸದಸ್ಯರಾಗಿದ್ದರು, ಸೌರವ್ ಗಂಗುಲಿ ಅವರ ನಾಯಕತ್ವದ ರನ್ನರ್ ಅಪ್ ಸ್ಥಾನ ಗಳಿಸಿತ್ತು.

ಮೊಂಗಿಯಾ ಪುಣೆಯಲ್ಲಿ ಅ.26, 2001 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಅಂತರ್ ರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ಭಾರತ ತಂಡದಲ್ಲಿ 57 ಏಕದಿನ ಪಂದ್ಯಗಳನ್ನು ಆಡಿದ್ದ ಅವರು 27.95 ಸರಾಸರಿಯಲ್ಲಿ 1230 ರನ್ ಗಳಿಸಿದ್ದರು. 1 ಶತಕ ಮತ್ತು 4 ಅರ್ಧಶತಕಗಳನ್ನು ಗಳಿಸಿದ್ದಾರೆ. 14 ವಿಕೆಟ್ ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದರು. ಮಾರ್ಚ್ 2002 ರಲ್ಲಿ ಗುವಾಹಟಿಯಲ್ಲಿ ಝಿಂಬಾಬ್ವೆ ವಿರುದ್ಧ ಅಜೇಯ 159 ರನ್ ಗಳಿಸಿರುವ ಮೊಂಗಿಯಾ ಅವರ ವೈಯಕ್ತಿಕ ಶ್ರೇಷ್ಠ ಸಾಧನೆ. ಅಲ್ಲದೆ ಕೆಲವು ನಿರ್ಣಾಯಕ ಇನ್ನಿಂಗ್ಸ್ ಗಳಲ್ಲಿ ತಂಡವನ್ನು ಆಧರಿಸಿದ್ದರು.

ಮೊಂಗಿಯಾ ಅವರು ವಿಶ್ವಕಪ್‌ನಲ್ಲಿ ಭಾರತದ ಪರ 11 ಪಂದ್ಯಗಳನ್ನು ಆಡಿದ್ದಾರೆ ಆದರೆ ಆ ಪೈಕಿ 6 ಪಂದ್ಯಗಳಲ್ಲಿ ಮಾತ್ರ ಬ್ಯಾಟಿಂಗ್ ಮಾಡುವ ಅವಕಾಶವನ್ನು ಅವರಿಗೆ ಲಭಿಸಿತ್ತು. ನೆದರ್ಲೆಂಡ್ ವಿರುದ್ಧ 42 ರನ್ ಗಳಿಸಿರುವುದು ವಿಶ್ವಕಪ್ ನಲ್ಲಿ ಅವರ ಗರಿಷ್ಠ ವೈಯಕ್ತಿಕ ಸ್ಕೋರ್.

ಮೊಂಗಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಏಕೈಕ ಟ್ವೆಂಟಿ-20 ಪಂದ್ಯವನ್ನು ಆಡಿದ್ದರು. ಇದು ಭಾರತದ ಮೊದಲ ಟ್ವೆಂಟಿ-20 ಅಂತರ್ ರಾಷ್ಟ್ರೀಯವಾಗಿದೆ. ಇದರಲ್ಲಿ 38 ರನ್ ಗಳಿಸಿದ್ದರು. ಮೊಂಗಿಯಾ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದರು. 121 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅವರು 48.95 ರ ಸರಾಸರಿಯಲ್ಲಿ 8028 ರನ್ ಗಳಿಸಿದ್ದಾರೆ.27 ಶತಕ ಹಾಗೂ 28 ಅರ್ಧಶತಕಗಳನ್ನು ಗಳಿಸಿರುವ ಅವರು ಗರಿಷ್ಠ ವೈಯಕ್ತಿಕ ಸ್ಕೋರ್ ಅಜೇಯ 308. ಅವರು 2008 . ಅ.26ರಂದು ಐಸಿಎಲ್‌ನಲ್ಲಿ ಆಡಿರುವುದು ಅವರ ಕೊನೆಯ ಸ್ಪರ್ಧಾತ್ಮಕ ಪಂದ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News