ಶ್ರೀನಗರಕ್ಕೆ ತೆರಳಲು ಸಾಧ್ಯವಾಗದೆ ಮಾಜಿ ಸಚಿವ ಯಶವಂತ್ ಸಿನ್ಹಾ ದಿಲ್ಲಿಗೆ ವಾಪಸ್

Update: 2019-09-18 07:38 GMT

ಶ್ರೀನಗರ, ಸೆ.18: ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಮಂಗಳವಾರ ಶ್ರೀನಗರ ವಿಮಾನ ನಿಲ್ದಾಣವನ್ನು ತಲುಪಿದರೂ ನಗರ ಪ್ರವೇಶಿಸಲು ಅನುಮತಿ ದೊರೆಯದ ಹಿನ್ನೆಲೆಯಲ್ಲಿ ದಿಲ್ಲಿಗೆ ವಾಪಸಾಗಿದ್ದಾರೆ.

ಸಿನ್ಹಾ ಅವರು ಮಂಗಳವಾರ ಮಧ್ಯಾಹ್ನ ಏರ್ ಮಾರ್ಷಲ್ ಕಪಿಲ್ ಕಾಕ್ (ನಿವೃತ್ತ) ಮತ್ತು ಸಾಮಾಜಿಕ ಕಾರ್ಯಕರ್ತ ಸುಶೋಬಾ ಭಾವೆ ಅವರೊಂದಿಗೆ ಶ್ರೀನಗರ ವಿಮಾನ ನಿಲ್ದಾಣಕ್ಕೆ ತೆರಳಿದ್ದರು.

ಸಿನ್ಹಾ ಅವರು ದಿಲ್ಲಿಯಿಂದ ಆಗಮಿಸಿದ ವಿಮಾನದಿಂದ ಶ್ರೀನಗರದಲ್ಲಿ ಕೆಳಗಿಳಿಯುತ್ತಿದ್ದಂತೆ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಪೊಲೀಸರು ತಕ್ಷಣ ಅವರನ್ನು ವಿಐಪಿ ಕೋಣೆಗೆ ಕರೆದೊಯ್ದರು, ಏಕೆಂದರೆ ಅವರನ್ನು ನಗರಕ್ಕೆ ಪ್ರವೇಶಿಸಲು ಅನುಮತಿಸಬೇಕೇ ಎಂಬ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಈ ಕಾರಣದಿಂದಾಗಿ ಸಿನ್ಹಾ ಅವರಿಗೆ ವಾಪಸಾಗುವಂತೆ ಕೇಳಲಾಯಿತು.

ಅಧಿಕಾರಿಗಳೊಂದಿಗೆ ವಾದಿಸಿದ ಸಿನ್ಹಾ ಅವರು ಶ್ರೀನಗರ ಪ್ರವೇಶಿಸಲು ಅವಕಾಶ ನೀಡುವ ಆದೇಶವನ್ನು ತೋರಿಸಿದರು ಎಂದು ಅಧಿಕಾರಿಗಳು ಹೇಳಿದರು.

ರಿಟರ್ನ್ ಫ್ಲೈಟ್ ಹತ್ತಲು ವಿರೋಧ ವ್ಯಕ್ತಪಡಿಸಿದ ಸಿನ್ಹಾ ಅವರು ನಗರ ಪ್ರವೇಶಿಸಲು ಅನುಮತಿ ನೀಡುವರೆಗೂ ವಿಮಾನ ನಿಲ್ದಾಣದಲ್ಲಿ ಇರುವುದಾಗಿ ರಾಜ್ಯ ಅಧಿಕಾರಿಗಳಿಗೆ ತಿಳಿಸಿದರು ಎಂದು ತಿಳಿದು ಬಂದಿದೆ. ರಾಜ್ಯ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಅಂತಿಮವಾಗಿ ಅವರ ಜೊತೆಗಿದ್ದ ತಂಡದ ಸದಸ್ಯರನ್ನು ಮರಳುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು. ಬಳಿಕ ಸಿನ್ಹಾ ದಿಲ್ಲಿಗೆ ವಿಮಾನ ಹತ್ತಿದರು.

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸುವ ನಿರ್ಧಾರವನ್ನು ಕೇಂದ್ರ ಸರಕಾರ ಪ್ರಕಟಿಸಿದ ಆಗಸ್ಟ್ 5 ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಬಂಧಗಳನ್ನು ವಿಧಿಸಲಾಗಿತ್ತು. ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News