1.75 ಕೋ.ಸಾಗರೋತ್ತರ ಭಾರತೀಯರು ವಿಶ್ವದ ಅತ್ಯಂತ ದೊಡ್ಡ ವಲಸಿಗ ಸಮುದಾಯ:ವಿಶ್ವಸಂಸ್ಥೆ

Update: 2019-09-18 15:23 GMT

ವಿಶ್ವಸಂಸ್ಥೆ,ಸೆ.18: ಸಾಗರೋತ್ತರ ಭಾರತೀಯರ ಸಂಖ್ಯೆ 1.75 ಕೋ.ತಲುಪುವುದರೊಂದಿಗೆ 2019ರಲ್ಲಿ ಭಾರತವು ಅಂತರರಾಷ್ಟ್ರೀಯ ವಲಸಿಗರ ಮೂಲದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಹೊಂದಿದೆ ಎಂದು ವಿಶ್ವಸಂಸ್ಥೆಯ ಸಾಮಾಜಿಕ ಮತ್ತು ಆರ್ಥಿಕ ವ್ಯವಹಾರಗಳ ಇಲಾಖೆ (ಡಿಇಎಸ್‌ಎ)ಯ ಜನಸಂಖ್ಯಾ ವಿಭಾಗವು ಬಿಡುಗಡೆಗೊಳಿಸಿರುವ ‘ ದಿ ಇಂಟರ್‌ನ್ಯಾಷನಲ್ ಮೈಗ್ರಂಟ್ ಸ್ಟಾಕ್ 2019 ’ ವರದಿಯು ಹೇಳಿದೆ. ವಿಶ್ವಾದ್ಯಂತ ವಲಸಿಗರ ಸಂಖ್ಯೆಯು ಅಂದಾಜು 27.20 ಕೋಟಿಯನ್ನು ತಲುಪಿದೆ ಎಂದು ಅದು ತಿಳಿಸಿದೆ. ವರದಿಯು ವಿಶ್ವದ ಎಲ್ಲ ದೇಶಗಳು ಮತ್ತು ಪ್ರದೇಶಗಳಿಗಾಗಿ ವಯಸ್ಸು,ಲಿಂಗ ಮತ್ತು ಮೂಲದ ವಿವರಗಳೊಂದಿಗೆ ಅಂತರರಾಷ್ಟ್ರೀಯ ವಲಸಿಗರ ಕುರಿತು ಇತ್ತೀಚಿನ ಅಂಕಿಸಂಖ್ಯೆಗಳನ್ನು ಒದಗಿಸಿದೆ.

ವಲಸಿಗರ ಮೂಲದೇಶಗಳ ಪಟ್ಟಿಯಲ್ಲಿನ ಅಗ್ರ 10 ರಾಷ್ಟ್ರಗಳಲ್ಲಿ ಮೂರನೇ ಒಂದು ಭಾಗದಷ್ಟು ಅಂತರರಾಷ್ಟ್ರೀಯ ವಲಸಿಗರು ನೆಲೆಸಿದ್ದಾರೆ. 2019ರಲ್ಲಿ 1.75 ಕೋ.ಭಾರತೀಯರು ವಿದೇಶಗಳಲ್ಲಿ ವಾಸವಾಗಿರುವುದರೊಂದಿಗೆ ಭಾರತವು ಈ ಪಟ್ಟಿಯಲ್ಲಿ ಅತ್ಯುನ್ನತ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಮೆಕ್ಸಿಕೊ (1.18 ಕೋ.),ಚೀನಾ (1.08 ಕೋ.),ರಷ್ಯಾ (1.05 ಕೋ.),ಸಿರಿಯಾ (0.82 ಕೋ.),ಬಾಂಗ್ಲಾದೇಶ (0.78 ಕೋ.),ಪಾಕಿಸ್ತಾನ (0.63 ಕೋ.),ಉಕ್ರೇನ್ (0.59 ಕೋ.),ಫಿಲಿಪ್ಪೀನ್ಸ್ (0.54 ಕೋ.) ಮತ್ತು ಅಫಘಾನಿಸ್ತಾನ (0.51 ಕೋ.) ಇವೆ.

2019ರಲ್ಲಿ ಭಾರತವು 51 ಲ.ವಲಸಿಗರಿಗೆ ನೆಲೆಯಾಗಿದೆ. 2015ರಲ್ಲಿ ಈ ಸಂಖ್ಯೆ 52 ಲ.ಆಗಿತ್ತು. 2010ರಿಂದ 2019ರವರೆಗಿನ ಅವಧಿಯಲ್ಲಿ ಭಾರತದ ಒಟ್ಟು ಜನಸಂಖ್ಯೆಯಲ್ಲಿ ವಿದೇಶಿ ವಲಸಿಗರ ಪಾಲು ಶೇ.0.4ರಲ್ಲಿ ಸ್ಥಿರವಾಗಿದೆ ಎಂದು ವರದಿಯು ತಿಳಿಸಿದೆ.

ಭಾರತವು 2,07,000 ನಿರಾಶ್ರಿತರಿಗೆ ಆಶ್ರಯವನ್ನು ಒದಗಿಸಿದ್ದು, ಇದು ದೇಶದಲ್ಲಿಯ ಒಟ್ಟು ವಿದೇಶಿ ವಲಸಿಗರ ಸಂಖ್ಯೆಯ ಶೇ.4ರಷ್ಟಿದೆ. ದೇಶದಲ್ಲಿರುವ ವಿದೇಶಿ ವಲಸಿಗರ ಸರಾಸರಿ ವಯೋಮಾನ 47.1 ವರ್ಷಗಳಾಗಿದ್ದು,ಇವರಲ್ಲಿ ಮಹಿಳೆಯರ ಪ್ರಮಾಣ ಶೇ.48.8ರಷ್ಟಿದೆ. ಭಾರತದಲ್ಲಿ ಅತ್ಯಧಿಕ ಸಂಖ್ಯೆಯ ವಿದೇಶಿ ವಲಸಿಗರು ಬಾಂಗ್ಲಾದೇಶ,ಪಾಕಿಸ್ತಾನ ಮತ್ತು ನೇಪಾಲ ಮೂಲದವರಾಗಿದ್ದಾರೆ.

2019ರಲ್ಲಿ ಪ್ರಾದೇಶಿಕವಾಗಿ ಯುರೋಪ್ ಅತ್ಯಧಿಕ ಸಂಖ್ಯೆಯ (8.20 ಕೋ.) ವಿದೇಶಿ ವಲಸಿಗರ ನೆಲೆಯಾಗಿದ್ದರೆ,ನಂತರದ ಸ್ಥಾನಗಳಲ್ಲಿ ಉತ್ತರ ಅಮೆರಿಕ (5.9 ಕೋ.) ಹಾಗೂ ಉತ್ತರ ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾ (4.90 ಕೋ.)ಗಳಿವೆ.

ದೇಶ ಮಟ್ಟದಲ್ಲಿ ಸುಮಾರು ಅರ್ಧದಷ್ಟು ವಿದೇಶಿ ವಲಸಿಗರು ಕೇವಲ 10 ರಾಷ್ಟ್ರಗಳಲ್ಲಿದ್ದಾರೆ. ಅಮೆರಿಕ ಅತ್ಯಂತ ಹೆಚ್ಚಿನ ಸಂಖ್ಯೆಯ (5.1 ಕೋ.) ವಿದೇಶಿ ವಲಸಿಗರಿಗೆ ಮಣೆ ಹಾಕಿದ್ದು,ಇದು ವಿಶ್ವದ ಒಟ್ಟು ವಲಸಿಗರ ಸಂಖ್ಯೆಯ ಶೇ.19ರಷ್ಟಿದೆ. ನಂತರದ ಸ್ಥಾನಗಳಲ್ಲಿ ಜರ್ಮನಿ ಮತ್ತು ಸೌದಿ ಅರೇಬಿಯ (ತಲಾ 1.30 ಕೋ.),ರಷ್ಯಾ (1.20 ಕೋ.),ಬ್ರಿಟನ್ (1 ಕೋ.),ಯುಎಇ (90 ಲ.),ಫ್ರಾನ್ಸ್,ಕೆನಡಾ ಮತ್ತು ಆಸ್ಟ್ರೇಲಿಯಾ (ತಲಾ ಸುಮಾರು 80 ಲ.) ಹಾಗೂ ಇಟಲಿ (60 ಲ.) ದೇಶಗಳಿವೆ.

ಮೂಲ ಮತ್ತು ತಾವು ವಾಸವಿರುವ ದೇಶಗಳ ಅಭಿವೃದ್ಧಿಯಲ್ಲಿ ವಲಸಿಗರು ಮತ್ತು ವಲಸೆಯ ಮಹತ್ವದ ಪಾತ್ರವನ್ನು ತಿಳಿದುಕೊಳ್ಳಲು ಈ ಅಂಕಿಅಂಶಗಳು ನಿರ್ಣಾಯಕವಾಗಿವೆ ಎಂದು ಡಿಇಎಸ್‌ಎಗೆ ವಿಶ್ವಸಂಸ್ಥೆಯ ಅಧೀನ ಮಹಾ ಕಾರ್ಯದರ್ಶಿ ಲಿಯು ಝೆನ್‌ಮಿನ್ ವರದಿಯಲ್ಲಿ ಹೇಳಿದ್ದಾರೆ.

ಕ್ರಮಬದ್ಧ,ಸುರಕ್ಷಿತ,ನಿಯಮಿತ ಮತ್ತು ಜವಾಬ್ದಾರಿಯುತ ವಲಸೆ ಮತ್ತು ಜನರ ಚಲನಶೀಲತೆಯನ್ನು ಸುಗಮಗೊಳಿಸುವುದು ಸುಸ್ಥಿರ ಅಭಿವೃದ್ಧಯ ಗುರಿಗಳನ್ನು ಸಾಧಿಸುವಲ್ಲಿ ಹೆಚ್ಚಿನ ಕೊಡುಗೆಯನ್ನು ನೀಡುತ್ತದೆ ಎಂದಿರುವ ವರದಿಯು,ಅಂತರರಾಷ್ಟ್ರೀಯ ಗಡಿಗಳಾದ್ಯಂತ ಬಲವಂತ ಸ್ಥಳಾಂತರಗಳ ಏರಿಕೆ ಮುಂದುವರಿದಿದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News