ನಾವು ಪ್ರತಿಯೊಬ್ಬ ಕಾಶ್ಮೀರಿಯನ್ನು ಆಲಂಗಿಸಬೇಕು, ಹೊಸ ಸ್ವರ್ಗ ಸೃಷ್ಟಿಸಬೇಕು: ಪ್ರಧಾನಿ ಮೋದಿ

Update: 2019-09-19 11:00 GMT

ನಾಸಿಕ್, ಸೆ.19: “ನಾವು ಕಾಶ್ಮೀರವೆಂಬ ಹೊಸ ಸ್ವರ್ಗವನ್ನು ಸೃಷ್ಟಿಸಬೇಕು, ಪ್ರತಿಯೊಬ್ಬ ಕಾಶ್ಮೀರಿಯನ್ನು ಆಲಂಗಿಸಬೇಕು” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮುಂದಿನ ತಿಂಗಳು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯವನ್ನು ನಾಸಿಕ್ ನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಭಾಗವಹಿಸುವ ಮೂಲಕ ಇಂದು ಆರಂಭಿಸಿದ ಪ್ರಧಾನಿ ಜಮ್ಮು ಕಾಶ್ಮೀರದಲ್ಲಿ ಹಿಂಸೆ ಸೃಷ್ಟಿಸಲು ಗಡಿಯಾಚೆಗಿನಿಂದ ಬಹಳಷ್ಟು ಪ್ರಯತ್ನಗಳು ನಡೆಯುತ್ತಿವೆ ಎಂದರು.

“370ನೇ ವಿಧಿಯನ್ನು ರದ್ದುಗೊಳಿಸುವ ನಿರ್ಧಾರ ದೇಶದ ಏಕತೆಗಾಗಿ ಕೈಗೊಂಡ ನಿರ್ಧಾರ,ಇದು ಜಮ್ಮು ಕಾಶ್ಮೀರದ ಜತೆಯ ಆಶೋತ್ತರಗಳನ್ನು ಹಾಗೂ ಕನಸುಗಳನ್ನು ಈಡೇರಿಸುವ ನಿರ್ಧಾರ'' ಎಂದರು.

“ದೀರ್ಘಾವಧಿಯ ಹಿಂಸಾತ್ಮಕ ವಾತಾವರಣದಿಂದ ಹೊರ ಬರಲು ಜಮ್ಮು ಕಾಶ್ಮೀರದ ಯುವ ಜನತೆ, ತಾಯಂದಿರು ಹಾಗೂ ಸೋದರಿಯರು ನಿರ್ಧರಿಸಿದ್ದಾರೆ, ಅವರಿಗೆ ಅಭಿವೃದ್ಧಿ ಹಾಗು ಹೊಸ ಉದ್ಯೋಗಾವಕಾಶಗಳು ಬೇಕು'' ಎಂದು ಪ್ರಧಾನಿ ಹೇಳಿದರು.

“ಜಮ್ಮು ಕಾಶ್ಮೀರ ಹಾಗೂ ಲಡಾಖ್ ನಲ್ಲಿನ ಸಮಸ್ಯೆ ಪರಿಹಾರಕ್ಕೆ ಹೊಸ ಯತ್ನಗಳನ್ನು ನಡೆಸುವ ಭರವಸೆಯನ್ನು ನಾವು ನೀಡಿದ್ದೇವೆ. ಆ ಕನಸುಗಳನ್ನು ಈಡೇರಿಸುವತ್ತ ದೇಶ ಸಾಗುತ್ತಿದೆ ಎಂದು ಇಂದು ಸಮಾಧಾನದಿಂದ ಹೇಳಬಲ್ಲೆ” ಎಂದರು.

“ಜಮ್ಮು ಕಾಶ್ಮೀರದ ಕುರಿತು ಸರಕಾರ ಕೈಗೊಂಡ ನಿರ್ಧಾರ 130 ಕೋಟಿ ಭಾರತೀಯರ ಭಾವನೆಗಳನ್ನು ಗೌರವಿಸಿ  ಕೈಗೊಳ್ಳಲಾಗಿದೆ. ಜಮ್ಮು ಕಾಶ್ಮೀರ ಹಾಗೂ ಲಡಾಖ್ ಅನ್ನು ಹಿಂಸೆ, ಉಗ್ರವಾದ, ಪ್ರತ್ಯೇಕತಾವಾದ ಹಾಗೂ ಭ್ರಷ್ಟಾಚಾರದಿಂದ ದೂರವಿರಿಸಲು ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಮೋದಿ ಹೇಳಿಕೊಂಡರು.

ಐವತ್ತು ಕೋಟಿ ಹಸುಗಳಿಗೆ ಲಸಿಕೆ ಹಾಕುವ ಸರಕಾರದ ಕಾರ್ಯಕ್ರಮಕ್ಕೆ ವ್ಯಕ್ತವಾದ ಟೀಕೆಗೆ ಪ್ರತಿಕ್ರಿಯಿಸಿದ ಪ್ರಧಾನಿ ‘ದನಗಳು ಮತ ಹಾಕುವುದಿಲ್ಲ’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News