ಶಿವಾಜಿನಗರ ಕ್ಷೇತ್ರಕ್ಕೆ ನಾನು ಪ್ರಬಲ ಆಕಾಂಕ್ಷಿ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್

Update: 2019-09-19 13:11 GMT

ಬೆಂಗಳೂರು, ಸೆ.19: ಅನರ್ಹ ಶಾಸಕ ಆರ್.ರೋಷನ್ ಬೇಗ್‌ ರಿಂದ ತೆರವಾಗಬಹುದಾದ ಶಿವಾಜಿನಗರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾದರೆ ನಾನು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ತಿಳಿಸಿದರು.

ಗುರುವಾರ ನಗರದ ಮಿಲ್ಲರ್ಸ್‌ ರಸ್ತೆಯಲ್ಲಿರುವ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 42 ವರ್ಷಗಳ ಕಾಲ ನಿಷ್ಠಾವಂತ ಕಾರ್ಯಕರ್ತನಾಗಿ ಸುದೀರ್ಘವಾಗಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಬೇರು ಮಟ್ಟದಿಂದ ಕಟ್ಟಲು ಶ್ರಮಿಸಿದ್ದೇನೆ ಎಂದರು.

ನಮ್ಮದು ಸ್ವಾತಂತ್ರ ಹೋರಾಟಗಾರರ ಕುಟುಂಬ. ನಮ್ಮ ಹಿರಿಯರು ದೇಶದ ಸ್ವಾತಂತ್ರಕ್ಕಾಗಿ ಜೈಲು ವಾಸವನ್ನು ಅನುಭವಿಸಿದ್ದಾರೆ. ಅನೇಕರು ವಿಧಾನಸಭೆ, ವಿಧಾನಪರಿಷತ್ ಹಾಗೂ ಲೋಕಸಭೆಗೆ ಆಯ್ಕೆಯಾಗಲು ಶ್ರಮಿಸಿದ್ದೇನೆ. ಹಲವು ಬಾರಿ ನನಗೆ ಅನ್ಯಾಯವಾಗಿದೆ. ಈ ಬಾರಿಯಾದರೂ ನನ್ನ ಪಕ್ಷ ನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನು ಪರಿಗಣಿಸಿ ಟಿಕೆಟ್ ನೀಡುತ್ತಾರೆ ಎಂಬ ನಂಬಿಕೆಯಿದೆ ಎಂದು ಅವರು ಹೇಳಿದರು.

ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರು ಇದ್ದರೂ, ಎಲ್ಲ ಧರ್ಮ, ಜಾತಿಗಳ ಜನರು ವಾಸಿಸುವ ಸಂಗಮವಾಗಿದೆ. ಸತತವಾಗಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ, ಈಗ ಅನರ್ಹರಾಗಿರುವ ಶಾಸಕ ರೋಷನ್ ಬೇಗ್, ಕ್ಷೇತ್ರದಲ್ಲಿ ಯಾವುದೇ ಗುರುತರವಾದ ಅಭಿವೃದ್ಧಿ ಮಾಡಿಲ್ಲ. ಉತ್ತಮ ರಸ್ತೆಗಳು, ತಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗಿದ್ದಾರೆ ಎಂದು ಅವರು ದೂರಿದರು.

ಕ್ಷೇತ್ರದೆಲ್ಲೆಡೆ ಸಂಚರಿಸುತ್ತಿದ್ದು, ಜನರನ್ನು ಭೇಟಿಯಾಗಿ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ತನ್ನ ಪರವಾಗಿ ಉತ್ತಮ ವಾತಾವರಣವಿದೆ. ಕಾಂಗ್ರೆಸ್ ಟಿಕೆಟ್ ನೀಡಿದರೆ ಗೆದ್ದು ತೋರಿಸುತ್ತೇನೆ ಎಂದು ಅಬ್ದುಲ್ ಅಝೀಝ್ ಹೇಳಿದರು.

ಶಿವಾಜಿನಗರ ಕ್ಷೇತ್ರದ ಅಭಿವೃದ್ಧಿಗೆ ಕೈಗೊಳ್ಳಬೇಕಿರುವ ಕಾಮಗಾರಿಗಳು, ಯೋಜನೆಗಳು, ಕಾರ್ಯಕ್ರಮಗಳ ಕುರಿತು ಈಗಾಗಲೇ ನೀಲಿನಕ್ಷೆ ತಯಾರಿಸಿದ್ದೇನೆ. ಅದನ್ನು ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರು ತಿಳಿಸಿದರು.

ಪಕ್ಷೇತರ ಅಭ್ಯರ್ಥಿ: ಕಾಂಗ್ರೆಸ್ ಪಕ್ಷ ಪ್ರಾಮಾಣಿಕರು, ಪಕ್ಷ ನಿಷ್ಠೆಯುಳ್ಳವರನ್ನು ಗುರುತಿಸಿ ಟಿಕೆಟ್ ನೀಡುತ್ತದೆ ಎಂಬ ವಿಶ್ವಾಸವಿದೆ. ಒಂದು ವೇಳೆ ಈ ಬಾರಿಯೂ ನಮಗೆ ಟಿಕೆಟ್ ನೀಡದೆ ವಂಚಿಸಿದರೆ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ನನ್ನ ಗೆಲುವಿಗೆ ಹೋರಾಟ ಮಾಡುತ್ತೇನೆ ಎಂದು ಅಬ್ದುಲ್ ಅಝೀಝ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News