ನೂತನ ಮೋಟರ್‌ ವಾಹನ ತಿದ್ದುಪಡಿ ಕಾಯ್ದೆ ವಿರೋಧಿಸಿ ವಕೀಲರ ಪ್ರತಿಭಟನೆ

Update: 2019-09-19 12:31 GMT

ಬೆಂಗಳೂರು, ಸೆ.19: ಕೇಂದ್ರ ಸರಕಾರ ಜಾರಿ ಮಾಡಿರುವ ನೂತನ ಮೋಟರ್ ವಾಹನ ಕಾಯ್ದೆ ತಿದ್ದುಪಡಿಯು ವಾಹನ ಸವಾರರಿಗೆ ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಇದನ್ನು ಕೂಡಲೇ ವಾಪಸ್ ಪಡೆದು, ಜನಸ್ನೇಹಿ ಕಾಯ್ದೆಯಾಗಿ ರೂಪಿಸಬೇಕೆಂದು ವಕೀಲರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.

ಗುರುವಾರ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ವಕೀಲರು, ಯಾವುದೇ ಕಾಯ್ದೆಯು ಜನತೆಗೆ ಪೂರಕವಾಗಿರಬೇಕೇ ವಿನಃ ಮಾರಕವಾಗಿರಬಾರದು. ಆದರೆ, ಕೇಂದ್ರ ಸರಕಾರ ಜಾರಿ ಮಾಡಿರುವ ನೂತನ ಮೋಟರ್ ವಾಹನ ತಿದ್ದುಪಡಿ ಕಾಯ್ದೆಯು ಎಲ್ಲ ರೀತಿಯಿಂದಲೂ ಜನವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುವ ದುಬಾರಿ ದಂಡದ ಕುರಿತು ಮಾತ್ರ ಎಲ್ಲರೂ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ವಾಹನ ಮಾಲಕರು ಸಂಕಷ್ಟಕ್ಕೆ ಬೀಳುವ ರೀತಿಯಲ್ಲಿ ವಿಮಾ ಕಂಪೆನಿಗಳಿಗೆ ಲಾಭ ತಂದುಕೊಡುವ ಸಲುವಾಗಿ ಕೇಂದ್ರ ಸರಕಾರ ನೂತನ ವಾಹನ ಕಾಯ್ದೆಗೆ ತಿದ್ದುಪಡಿ ತಂದಿದ್ದಾರೆ. ಇವರಿಗೆ ಜನಸಾಮಾನ್ಯರಿಗಿಂತ ವಿಮಾ ಕಂಪೆನಿಗಳನ್ನು ಉದ್ದಾರ ಮಾಡುವುದೇ ಆದ್ಯತೆಯಾಗಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಕೇಂದ್ರ ಸರಕಾರದ ನೂತನ ಮೋಟರ್ ವಾಹನ ತಿದ್ದುಪಡಿ ಕಾಯ್ದೆಗೆ ವಾಹನ ಸವಾರರು ಮೊದಲುಗೊಂಡು ಎಲ್ಲ ಕ್ಷೇತ್ರದ ಜನತೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ರಾಜ್ಯ ಸರಕಾರ ಕೂಡಲೇ ಜನಕ್ಕೆ ಹಿತವಾಗುವಂತಹ ರೀತಿಯಲ್ಲಿ ಕಾಯ್ದೆಯನ್ನು ರೂಪಿಸಬೇಕೆಂದು ಅವರು ಒತ್ತಾಯಿಸಿದರು. ಈ ವೇಳೆ ಸಂಘದ ಕಾರ್ಯದರ್ಶಿ ಗಂಗಾಧರಯ್ಯ, ಖಜಾಂಚಿ ಶಿವಮೂರ್ತಿ ಸೇರಿದಂತೆ ಸಂಘದ ನೂರಾರು ಸದಸ್ಯರು ಪ್ರಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News