ಉಪನ್ಯಾಸಕರ ನೇಮಕಾತಿ ಪರೀಕ್ಷೆ ಮರು ಮೌಲ್ಯಮಾಪನಕ್ಕೆ ಆಗ್ರಹ

Update: 2019-09-19 12:43 GMT

ಬೆಂಗಳೂರು, ಸೆ.19: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿಗೆ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಉತ್ತರಗಳನ್ನು ಪ್ರಕಟಿಸಿದ್ದು, ಅದರಲ್ಲಿ ಲೋಪಗಳಿವೆ. ಆದ್ದರಿಂದ ಮರುವೌಲ್ಯಮಾಪನ ನಡೆಸಬೇಕು ಎಂದು ಅಭ್ಯರ್ಥಿಗಳು ಇಲಾಖೆಯನ್ನು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಪರ್ಧಾತ್ಮಕ ಪರೀಕ್ಷೆಯ ಅಭ್ಯರ್ಥಿ ಅಂಜನಮೂರ್ತಿ, ಕೆಇಎ 2016 ಮತ್ತು 2017ರಲ್ಲಿ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಆದರೆ ಪರೀಕ್ಷೆ ನಡೆಸಿರಲಿಲ್ಲ. 2018ರಲ್ಲಿ ಅಧಿಸೂಚನೆ ಹೊರಡಿಸಿ ಪರೀಕ್ಷೆ ನಡೆಸಿತು. 1,200 ಹುದ್ದೆಗೆ ರಾಜ್ಯಾದ್ಯಂತ 65 ಸಾವಿರಕ್ಕೂ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ಮೂರು ಬಾರಿ ಕೀ ಉತ್ತರ ಪ್ರಕಟಿಸಿದೆ. ಆದರೆ, ಪ್ರತಿ ವಿಷಯಗಳ ಉತ್ತರಗಳಲ್ಲಿ ತಪ್ಪುಗಳಿವೆ. ಆದರೂ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆಗೆ ಮುಂದಾಗಿದ್ದು, ಮರುವೌಲ್ಯಮಾಪನ ನಡೆಸಬೇಕು ಎಂದು ಆಗ್ರಹಿಸಿದರು.

ಈ ನೇಮಕಾತಿಯಲ್ಲಿ 2014-15ನೇ ಶೈಕ್ಷಣಿಕ ಸಾಲಿನ ಉಪನ್ಯಾಸಕರ ಖಾಲಿ ಹುದ್ದೆಗಳನ್ನು ಮಾತ್ರ ನೇಮಕಾತಿ ಪರಿಗಣಿಸಲಾಗಿದ್ದು, ಆಕಾಂಕ್ಷಿಗಳು ಉದ್ಯೋಗ ಅವಕಾಶದಿಂದ ವಂಚಿತರಾಗಿದ್ದಾರೆ. ಒಂದನೇ ಕೀ ಉತ್ತರ ಮತ್ತು ಎರಡನೇ ಕೀ ಉತ್ತರಕ್ಕೆ ಇತಿಹಾಸದಲ್ಲಿ 18, ಕನ್ನಡ 18, ಇಂಗ್ಲಿಷ್‌ನಲ್ಲಿ 10 ಉತ್ತರಗಳು ಬದಲಾಗಿದೆ. ಆದ್ದರಿಂದ ಪರೀಕ್ಷೆಯ ಅಭ್ಯರ್ಥಿ ಹೇಮಲತಾ ಎಂಬುವವರು ಆರ್‌ಟಿಇ ಮೂಲಕ ಇಂಗ್ಲಿಷ್ ಪತ್ರಿಕೆಯ ಆಧಾರ ಗ್ರಂಥಗಳ ಮಾಹಿತಿ ಕೇಳಿದ್ದು, ಕೆಇಎ ಮಾಹಿತಿ ಲಭ್ಯವಿಲ್ಲವೆಂದು ತಿಳಿಸಿದೆ. ಕೆಲವರಿಗೆ ಹುದ್ದೆ ನೀಡಲು ಸರಿ ಉತ್ತರ ಬರೆದವರನ್ನು ವಂಚಿಸಲಾಗುತ್ತಿದೆ. ಆದ್ದರಿಂದ ಮರು ವೌಲ್ಯಮಾಪನ ನಡೆಸಬೇಕು ಎಂದರು.

ವಿಜಯಪುರ ಪರೀಕ್ಷಾ ಅಭ್ಯರ್ಥಿ ಪ್ರಶಾಂತ್ ಮಾತನಾಡಿ, ಕನ್ನಡ ವಿಷಯದಲ್ಲಿ 25ಕ್ಕೂ ಅಧಿಕ ಪ್ರಶ್ನೆಗಳಲ್ಲಿ ದೋಷವಿದ್ದು, ಸಣ್ಣ-ಸಣ್ಣ ವ್ಯಾಕರಣ ದೋಷವನ್ನು ಆಧರಿಸಿ ಕೆಲವು ಪ್ರಶ್ನೆಗಳಿಗೆ ಗ್ರೇಸ್ ಅಂಕ ನೀಡಲಾಗಿದೆ. ಇದು ಮೂರನೇ ವ್ಯಕ್ತಿಗೆ ಸಹಾಯ ಮಾಡಿದಂತೆ ಕಂಡುಬರುತ್ತಿದೆ. ಆದ್ದರಿಂದ ಈ ನೇಮಕಾತಿ ಬಗ್ಗೆ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News