ಋಣ ಪರಿಹಾರ ಕಾಯ್ದೆಯ ತಡೆಯಾಜ್ಞೆ ಪಾಲಿಸಲು ಗಿರವಿ ಒಕ್ಕೂಟ ಒತ್ತಾಯ

Update: 2019-09-19 12:43 GMT

ಬೆಂಗಳೂರು, ಸೆ.19: ಹೈಕೋರ್ಟ್ ಋಣ ಪರಿಹಾರ ಕಾಯ್ದೆ 2018ಕ್ಕೆ ತಡೆಯಾಜ್ಞೆ ನೀಡಿದ್ದು, ಆ ತಡೆಯಾಜ್ಞೆಯನ್ನು ಸಂಬಂಧಪಟ್ಟ ಸಹಕಾರ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಪಾಲಿಸುವಂತೆ ಕರ್ನಾಟಕ ರಾಜ್ಯ ಗಿರವಿ ವರ್ತಕರ ಸಂಘಗಳ ಒಕ್ಕೂಟ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಸಲಹೆಗಾರ ಎಸ್.ದತ್ತಾತ್ರಿ ಮಾತನಾಡಿ, ಅನಧಿಕೃತ ಖಾಸಗಿ ವ್ಯಕ್ತಿಗಳು ವಿಧಿಸುವ ಮಿತಿಮೀರಿದ ಬಡ್ಡಿಯ ಸುಳಿಯೊಳಗೆ ಸಿಲುಕಿ ನರಳುತ್ತಿರುವ ನಾಡಿನ ಬಡ ವರ್ಗದ ಜನರನ್ನು ಋಣ ಮುಕ್ತಗೊಳಿಸಲು ಸರಕಾರ ಜಾರಿಗೆ ತಂದಿರುವ ಋಣ ಮುಕ್ತ ಕಾಯ್ದೆಯನ್ನು ರಾಜ್ಯ ಸರಕಾರ ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳುತ್ತಿದೆ ಎಂದು ತಿಳಿಸಿದರು.

ಕುಟುಂಬದ ಒಟ್ಟು ವಾರ್ಷಿಕ ವರಮಾನ 1.20 ಲಕ್ಷ ಮೀರದ ಬಡವರು ಸಣ್ಣ ಮತ್ತು ಅತಿ ಸಣ್ಣ ರೈತರು ಜಮೀನು ಚಿನ್ನಾಭರಣ ಭದ್ರತೆ ನೀಡಿ ಅಥವಾ ಯಾವುದೇ ಭದ್ರತೆ ಇಲ್ಲದೆ ಪಡೆದಿರುವ ಎಲ್ಲ ಸಾಲಗಳನ್ನು ಅವರು ಪಾವತಿಸುವಂತಿಲ್ಲ. ನೋಂದಾಯಿತ ಗಿರವಿದಾರರ ಬಳಿ ಪಡೆದಿರುವ ಸಾಲದಿಂದಲೂ ಋಣಮುಕ್ತಗೊಳಿಸುವುದು ನಿಯಮದಲ್ಲಿದೆ. ಅದರಂತೆ ಜನರು ಗಿರವಿ ಚೀಟಿಗಳನ್ನು ಆಯಾ ಜಿಲ್ಲೆಗಳಲ್ಲಿ ಸರಕಾರಕ್ಕೆ ಸಲ್ಲಿಸುತ್ತಿದ್ದು, ಅವರ ಸಾಲಗಳನ್ನು ಮನ್ನಾ ಮಾಡಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಿದರು.

ಸಾಲವನ್ನು ಗಿರವಿ ವರ್ತಕರು ಎಂದಿಗೂ ವಿರೋಧಿಸುವುದಿಲ್ಲ. ಆದರೆ ಸರಕಾರಿ ಇಲಾಖೆ ನೀತಿ ನಿಯಮಗಳ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಗಿರವಿ ಅಂಗಡಿಗಳಿಗೂ ಈ ನಿಯಮ ಅನ್ವಯ ಮಾಡುವುದು ಸರಿಯಲ್ಲ. ನಿಯಮ ಬಾಹಿರವಾಗಿ ಅಕ್ರಮ ವ್ಯವಹಾರ ನಡೆಸುತ್ತಿರುವ ಗಿರವಿ ವರ್ತಕರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಲಿ. ಆದರೆ ಸಕ್ರಮವಾಗಿ ನಿಯಮ- ನೀತಿ ಪಾಲಿಸುತ್ತಿರುವ ಗಿರವಿ ವರ್ತಕರಿಗೆ ಕಾಯ್ದೆಯಿಂದ ವಿನಾಯಿತಿ ನೀಡಲಿ ಎಂದು ಆಗ್ರಹಿಸಿದರು.

ಪ್ರಸ್ತುತ ಹೈಕೋರ್ಟ್ ಋಣ ಪರಿಹಾರ ಕಾಯ್ದೆಗೆ ತಾತ್ಕಾಲಿಕವಾಗಿ ತಡೆಯಾಜ್ಞೆ ನೀಡಿದ್ದರೂ, ಸಂಬಂಧ ಪಟ್ಟ ಇಲಾಖೆಗಳೂ ಪ್ರಕ್ರಿಯೆಯನ್ನು ಮುಂದುವರೆಸುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಸಹಕಾರ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಈ ಪ್ರಕ್ರಿಯೆಗಳನ್ನು ತಡೆಹಿಡಿಯುವಂತೆ ನ್ಯಾಯಾಲಯ ಸೂಕ್ತ ನಿರ್ದೇಶನ ನೀಡಬೇಕು. ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯ ಗಿರವಿದಾರರು ಎಂದಿನಂತೆ ವ್ಯವಹಾರ ನಡೆಸಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News