ಪಾಕ್ ಕುರಿತ ನನ್ನ ಹೇಳಿಕೆಯನ್ನು ಪರಿಶೀಲಿಸಿ: ಪ್ರಧಾನಿ ವಾಗ್ದಾಳಿಗೆ ಪವಾರ್ ಪ್ರತಿಕ್ರಿಯೆ

Update: 2019-09-21 05:46 GMT

ಔರಂಗಾಬಾದ್, ಸೆ.20: ನನ್ನನ್ನು ಟೀಕಿಸುವ ಮೊದಲು ಪಾಕಿಸ್ತಾನದ ಕುರಿತು ನಾನು ನೀಡಿರುವ ಹೇಳಿಕೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಪರಿಶೀಲಿಸಬೇಕು ಎಂದು ಎನ್‌ಸಿಪಿ ಮುಖಂಡ ಶರದ್ ಪವಾರ್ ಹೇಳಿದ್ದಾರೆ.

ಮಹಾರಾಷ್ಟ್ರದ ಅಸೆಂಬ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ಗುರುವಾರ ನಾಸಿಕ್‌ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪವಾರ್ ಪಾಕಿಸ್ತಾನವನ್ನು ತುಂಬಾ ಇಷ್ಟಪಡುತ್ತಾರೆ. ಅವರಂತಹ ಹಿರಿಯ ರಾಜಕಾರಣಿ ಮತಕ್ಕೋಸ್ಕರ ತಪ್ಪು ಹೇಳಿಕೆಯನ್ನು ನೀಡುತ್ತಿದ್ದಾರೆ. ಪವಾರ್ ಇಷ್ಟಪಡುವ ಪಾಕ್‌ನಲ್ಲಿ ಭಯೋತ್ಪಾದಕರ ಕಾರ್ಖಾನೆ ಇದೆ ಎಂದು ಎಲ್ಲರಿಗೂ ಗೊತ್ತಿದೆ ಎಂದಿದ್ದರು.

‘‘ನಾನು ನೆರೆಯ ರಾಷ್ಟ್ರವನ್ನು ಇಷ್ಟಪಡುತ್ತೇನೆಂದು ಪ್ರಧಾನಮಂತ್ರಿ ಹೇಳಿದ್ದಾರೆ. ನಾನು ಈ ದೇಶದ ರಕ್ಷಣಾ ಸಚಿವನಾಗಿದ್ದೆ. ನನ್ನನ್ನು ಟೀಕಿಸುವ ಮೊದಲು ಪ್ರಧಾನಮಂತ್ರಿ ನನ್ನ ಹೇಳಿಕೆಯನ್ನೊಮ್ಮೆ ಪರಿಶೀಲಿಸಿ ನೋಡಲಿ. ಪಾಕ್‌ನ ರಾಜಕೀಯ ಹಾಗೂ ಸೇನಾ ನಾಯಕರುಗಳು ಭಾರತ ವಿರುದ್ಧ ತಪ್ಪು ಹೇಳಿಕೆಗಳನ್ನು ನೀಡುತ್ತಾ ದ್ವೇಷ ಹರಡುತ್ತಾರೆ. ಆದರೆ, ಭಾರತೀಯ ಕ್ರಿಕೆಟ್ ತಂಡದೊಂದಿಗೆ ನಾನು ಪಾಕಿಸ್ತಾನಕ್ಕೆ ತೆರಳಿದ ಸಂದರ್ಭ ಅಲ್ಲಿನ ಜನರು ಭಾರತವನ್ನು ಇಷ್ಟಪಡುವುದನ್ನು ಗಮನಿಸಿದ್ದೇನೆ ಎಂದು ಹೇಳಿದ್ದೆ. ನಾನು ಮೋದಿಯನ್ನು ಟೀಕಿಸಲಾರೆ. ಪ್ರಧಾನಮಂತ್ರಿ ಕಚೇರಿಯ ಗೌರವಕ್ಕೆ ಧಕ್ಕೆ ತರಲು ನಾನು ಬಯಸುವುದಿಲ್ಲ’’ ಎಂದು ಪವಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News