ಸೆ.25ಕ್ಕೆ ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ಆದೇಶ

Update: 2019-09-21 11:40 GMT

ಹೊಸದಿಲ್ಲಿ, ಸೆ.20: ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿ ನ್ಯಾಯಾಂಗ ಬಂಧನದಲ್ಲಿರುವ ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್‌ಗೆ ಜಾಮೀನು ಅರ್ಜಿಯ ಕುರಿತ ಆದೇಶವನ್ನು ರೋಸ್ ಅವೆನ್ಯೂ ಕೋರ್ಟ್ ಸೆ.25ಕ್ಕೆ ಕಾಯ್ದಿರಿಸಿದೆ. ನ್ಯಾಯಾಲಯದ ಈ ನಿರ್ಧಾರದಿಂದ ಶಿವಕುಮಾರ್ ತಿಹಾರ್ ಜೈಲಿನಲ್ಲಿ ಇನ್ನೂ ಐದು ದಿನ ಕಳೆಯಬೇಕಾಗಿದೆ.

ಈಡಿ ಪರ ಹಾಗೂ ಶಿವಕುಮಾರ್ ಪರ ವಾದ-ವಿವಾದವನ್ನು ಆಲಿಸಿದ ರೋಸ್ ಅವೆನ್ಯೂ ಕೋರ್ಟ್‌ನ ನ್ಯಾಯಾಧೀಶ ಅಜಯ ಕುಮಾರ್ ಕುಹರ್ ಸೆ.25 ರಂದು ಮಧ್ಯಾಹ್ನ 3:30ಕ್ಕೆ ಆದೇಶವನ್ನು ಕಾಯ್ದಿರಿಸಿದರು.

ಈ.ಡಿ.ವಾದ ಪೂರ್ವಾಗ್ರಹ ಪೀಡಿತವಾಗಿದೆ. ಇದುವರೆಗೆ 198 ಗಂಟೆಗಳ ವಿಚಾರಣೆ ನಡೆಸಲಾಗಿದೆ. ಪ್ರತಿ ದಿನ 9 ಗಂಟೆ ವಿಚಾರಣೆ ಅಮಾನವೀಯ. ಹಣದ ಮೊತ್ತದ ಉಲ್ಲೇಖ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇವೆಲ್ಲವೂ ಊಹೆಗಳಿಂದ ನಡೆಯುತ್ತಿದೆ. ಯಾವ ತಪ್ಪೂ ಮಾಡಿಲ್ಲ ಅಂದರೂ ವಿಚಾರಣೆ ನೆಪದಲ್ಲಿ ಕಿರುಕುಳ ನೀಡಲಾಗುತ್ತಿದೆ. ಶಿವಕುಮಾರ್ ಯಾವ ದಾಖಲೆಯನ್ನೂ ಫೋರ್ಜರಿ ಮಾಡಲ್ಲ. ಸಾಕ್ಷ ನಾಶ ಆರೋಪ ಮಾಡುವ ಈ.ಡಿ. ತಾನೇ ಸಾಕ್ಷ ತಿರುಚುವುದು ಸರಿಯಲ್ಲ. ಎಲ್ಲ ದಾಖಲೆಗಳನ್ನು ಈ.ಡಿ.ಜಪ್ತಿ ಮಾಡಿದೆ. ನಾಯಿ ಬಾಲವನ್ನು ಅಲ್ಲಾಡಿಸುವುದು ಸಹಜ. ಆದರೆ ಇಲ್ಲಿ ಬಾಲವೇ ನಾಯಿಯನ್ನು ಅಲ್ಲಾಡಿಸುತ್ತಿದೆ. ಅಪರಾಧ ಮಾಡಿರುವುದು ಮರ. ಹಣ್ಣು ತ್ರಿಶಂಕು ಸ್ಥಿತಿಯಲ್ಲಿ ನೇತಾಡುತ್ತಿದೆ ಎಂದು ಎಂದು ಶಿವಕುಮಾರ್ ಪರ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು.

ಶಿವಕುಮಾರ್ ಕಾನೂನುಬಾಹಿರವಾಗಿ ಗಳಿಸಿರುವ ಆಸ್ತಿಗೆ ಆದಾಯ ತೆರಿಗೆ ಪಾವತಿಸಿದ್ದಾಗಿ ಹೇಳುತ್ತಾರೆ. ಆದರೆ ಆದಾಯ ತೆರಿಗೆ ಕಾಯ್ದೆಯು ಅಕ್ರಮವಾಗಿ ಗಳಿಸಿದ ಆಸ್ತಿಯನ್ನು ಸಕ್ರಮವಾಗಿಸಲು ಅವಕಾಶ ನೀಡುವುದಿಲ್ಲ. ಐಟಿ ಕಾಯ್ದೆ ಅಡಿ ಘೋಷಣೆ ಮಾಡಿದ ಆಸ್ತಿಯನ್ನು ಸಕ್ರಮ ಮಾಡಲಾಗದು. ಅಕ್ರಮ ಹಣಕ್ಕೆ ತೆರಿಗೆ ಕಟ್ಟಿ ಅದನ್ನು ಸಕ್ರಮ ಎಂದು ಬಿಂಬಿಸುವುದು ಸರಿಯಲ್ಲ. ಕಪ್ಪು ಹಣ, ಕಪ್ಪು ಹಣವೇ ಆಗುತ್ತದೆ. ಶಿವಕುಮಾರ್ ಪ್ರಭಾವಿ ವ್ಯಕ್ತಿ. ಅವರಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ನಟರಾಜ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News