ಕುರ್ಚಿ ಉಳಿಸಿಕೊಳ್ಳಲು ಬಿಎಸ್‌ವೈ ದಿಲ್ಲಿಗೆ ಹೋಗಿದ್ದಾರೆ: ದೇವೇಗೌಡ

Update: 2019-09-22 13:03 GMT

ಬೆಂಗಳೂರು, ಸೆ. 22: ‘ರಾಜಕಾರಣಿಯೊಬ್ಬರಿಗೆ ಕುರ್ಚಿ ಉಳಿಸಿಕೊಳ್ಳುವುದು ಮುಖ್ಯವಾದಾಗ ರಾಜ್ಯದ ಜನತೆ ಅವರ ನೆನಪಿಗೆ ಬರುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಇಂದಿಲ್ಲಿ ಟೀಕಿಸಿದ್ದಾರೆ.

ರವಿವಾರ ಜೆಪಿ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಈಗ ಕುರ್ಚಿ ಅನಿವಾರ್ಯವಾಗಿದೆ. ಅದಕ್ಕಾಗಿ ಅವರಿಗೆ ಹೊಸದಿಲ್ಲಿಗೆ ಹೋಗಿದ್ದಾರೆ. ರಾಜ್ಯದಲ್ಲಿ ಕೆಟ್ಟ ರಾಜಕೀಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ನೆರೆ ಪರಿಸ್ಥಿತಿ ಹಿನ್ನೆಲೆಯಲ್ಲಿ ಜನರು ನಿತ್ಯ ಕಣ್ಣೀರು ಹಾಕುವಂತಹ ಸ್ಥಿತಿ ಇರುವಾಗ ಯಡಿಯೂರಪ್ಪ ಅವರು ಕುರ್ಚಿ ಹೇಗೆ ಉಳಿಸಿಕೊಳ್ಳಲು ಕಸರತ್ತು ಮಾಡುತ್ತಿದ್ದಾರೆ. ಸಂಕಷ್ಟದಲ್ಲಿರುವ ಜನರ ಸಮಸ್ಯೆ ಪರಿಹಾರಕ್ಕೆ ಗಮನ ಹರಿಸುತ್ತಿಲ್ಲ ಎಂದು ದೇವೇಗೌಡ ವಾಗ್ದಾಳಿ ನಡೆಸಿದರು.

ಅನರ್ಹ ಶಾಸಕರ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ಭೇಟಿಯಾಗಲು ಯಡಿಯೂರಪ್ಪ ದಿಲ್ಲಿಗೆ ಹೋಗಿದ್ದಾರೆ. ಉಪಚುನಾವಣೆ ಘೋಷಣೆಯ ನಂತರ ಅವರು ದಿಲ್ಲಿಗೆ ತೆರಳಿದ್ದಾರೆಂದ ಅವರು, ಅನರ್ಹರ ಬಗ್ಗೆ ನಾನೇನು ಹೇಳುವುದಿಲ್ಲ ಎಂದು ನಿರಾಕರಿಸಿದರು.

ಹೈಕೋರ್ಟ್ ಆದೇಶವಿದ್ದರೂ ಕಾಂಗ್ರೆಸ್ ಪಕ್ಷದ ಸ್ನೇಹಿತರಿಗಾಗಿ ಮಂಡ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಒಬ್ಬರನ್ನು ಅಮಾನತು ಮಾಡಿದ್ದಾರೆ. ನಾಳೆ ಚುನಾವಣೆ ಇದೆ. ಘನ ಸರಕಾರ ಅಮಾನತು ಮಾಡಿದೆ ಎಂದು ಅವರು ಲೇವಡಿ ಮಾಡಿದರು.

ಮಂಡ್ಯ ಜಿಲ್ಲೆಯಲ್ಲಿ ಬೆಳಗ್ಗೆ ಕಾಂಗ್ರೆಸ್, ಮಧ್ಯಾಹ್ನ ಬಿಜೆಪಿಗೆ ಹೋಗುವವರು ತುಂಬಾ ಇದ್ದಾರೆ. ಅಂತಹವರನ್ನು ತೃಪ್ತಿ ಪಡಿಸಲು ಸಿಎಂ ದಿಲ್ಲಿಗೆ ಹೋಗುವ ಮುನ್ನ ಅಮಾನತು ಮಾಡಿದ್ದಾರೆ ಎಂದು ದೇವೇಗೌಡ, ಬಿಎಸ್‌ವೈ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಸಂಸದ ತೇಜಸ್ವಿ ಸೂರ್ಯ ಅವರ ಬದ್ಧತೆ ನನಗೆ ಇಷ್ಟವಾಯಿತು. ಉದಯೋನ್ಮುಖ ನಾಯಕರಿಗೆ ಬದ್ಧತೆ ಮುಖ್ಯ. ಪಕ್ಷ ಯಾವುದೇ ಇರಲಿ ಅವರ ಬದ್ಧತೆ ಮುಖ್ಯ ಎಂದು ದೇವೇಗೌಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News