370ನೇ ವಿಧಿ ರದ್ದತಿಯಿಂದ ಎಲ್ಲರಿಗೂ ಸಮಾನ ಮೀಸಲಾತಿ ಹಂಚಿಕೆ: ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ

Update: 2019-09-22 14:38 GMT

ಬೆಂಗಳೂರು, ಸೆ.22: ಸಂವಿಧಾನದ 370ನೇ ವಿಧಿ ರದ್ದತಿಯಿಂದ ಜಮ್ಮು-ಕಾಶ್ಮೀರದಲ್ಲಿ ಎಲ್ಲರಿಗೂ ಸಮಗ್ರವಾದ ಮೀಸಲಾತಿ ಸಿಗಲಿದೆ ಹಾಗೂ ಎಲ್ಲ ಸಮುದಾಯದವರಿಗೂ ಕಾಶ್ಮೀರಿಗಳಂತೆ ಸಮಾನ ಹಕ್ಕುಗಳು ಸಿಗಲಿವೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ ನಡ್ಡಾ ಹೇಳಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ರಾಜ್ಯ ಬಿಜೆಪಿ ಇಂದು ಆಯೋಜಿಸಿದ್ದ 370ನೇ ವಿಧಿ ಬಗೆಗಿನ ಜನಜಾಗರಣಾ ಸಭೆಯಲ್ಲಿ ಮಾತನಾಡಿದ ಅವರು, ಜಮ್ಮು-ಕಾಶ್ಮೀರದಲ್ಲಿ ಸ್ವತಂತ್ರ್ಯಾ ನಂತರ ನೆಲೆಸಿದ್ದ ಪೂರ್ವ ಪಾಕಿಸ್ತಾನದವರಿಗೆ, ಗುಜ್ಜಾರ್ ಸಮುದಾಯದವರಿಗೆ ಯಾರಿಗೂ ಹಕ್ಕುಗಳೇ ಇಲ್ಲದಂತಾಗಿದ್ದು, ಈ ವಿಧಿ ರದ್ದತಿಯಿಂದ ಎಲ್ಲರಿಗೂ ಅವರ ಹಕ್ಕುಗಳು ಸಿಗಲಿದೆ ಎಂದು ಪ್ರತಿಪಾದಿಸಿದರು.

ದೇಶದ ಸಾರ್ವಭೌಮತೆಯನ್ನು ರಕ್ಷಿಸಲು ಹಾಗೂ ರಾಷ್ಟ್ರದ ಹಿತವನ್ನು ಗಮನದಲ್ಲಿಟ್ಟುಕೊಂಡು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡುವ ಐತಿಹಾಸಿಕ ತೀರ್ಮಾನವನ್ನು ಕೇಂದ್ರದ ಬಿಜೆಪಿ ಸರಕಾರ ಕೈಗೊಂಡಿದೆ. ಈ ಮೂಲಕ ಜಮ್ಮು-ಕಾಶ್ಮೀರದ ಜನ ಮುಖ್ಯವಾಹಿನಿಯಲ್ಲಿ ಬೆರೆಯುವ ವಾತಾವರಣವನ್ನು ಸೃಷ್ಠಿ ಮಾಡಿದೆ ಎಂದರು.

ಕೇಂದ್ರದಲ್ಲಿ ಕಾನೂನು ಸಚಿವರಾಗಿದ್ದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕಾಶ್ಮೀರಕ್ಕೆ 370ನೆ ವಿಧಿ ಪ್ರಕಾರ ವಿಶೇಷ ಸ್ಥಾನಮಾನ ನೀಡುವುದಕ್ಕೆ ವಿರೋಧವಾಗಿದ್ದರು. ಜಮ್ಮು-ಕಾಶ್ಮೀರ ಇನ್ನು ಮುಂದೆ ಭಾರತದ ಅವಿಭಾಜ್ಯ ಅಂಗವಾಗಿ ದೇಶದ ಮುಖ್ಯವಾಹಿನಿಯಲ್ಲಿ ಬೆರೆತು ಇತರ ರಾಜ್ಯಗಳಂತೆ ಅಭಿವೃದ್ಧಿಯನ್ನು ಕಾಣಲಿದೆ ಎಂದು ಅವರು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಮಾತನಾಡಿ, ಸಂವಿಧಾನದ 370ನೇ ವಿಧಿ ರದ್ದತಿಯನ್ನು ವಿರೋಧಿಸುತ್ತಿರುವವರು ದೇಶ ವಿರೋಧಿಗಳು. ದೇಶ ಭಕ್ತರು ಈ ಐತಿಹಾಸಿಕ ತೀರ್ಮಾನವನ್ನು ಸ್ವಾಗತಿಸಿದ್ದಾರೆ ಎಂದರು.

ಸಭೆಯಲ್ಲಿ ಕೇಂದ್ರ ಸಚಿವ ಸದಾನಂದಗೌಡ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ವಿ. ಸೋಮಣ್ಣ, ಸಂಸದರಾದ ಪಿ.ಸಿ ಮೋಹನ್, ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್‌ಕುಮಾರ್, ಅರವಿಂದ ಲಿಂಬಾವಳಿ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News