ನಾಮಪತ್ರ ಸಲ್ಲಿಸಿ ಎಲ್ಲೇ ಕುಳಿತರೂ ಜನತೆ ಗೆಲ್ಲಿಸಲಿದ್ದಾರೆ: ಅನರ್ಹ ಶಾಸಕ ರಮೇಶ್ ಜಾರಕಿಹೊಳಿ

Update: 2019-09-22 14:48 GMT

ಬೆಳಗಾವಿ, ಸೆ. 22: ಗೋಕಾಕ್ ಕ್ಷೇತ್ರದ ಜನ ನನ್ನ ಮೇಲೆ ವಿಶ್ವಾಸ ಇಟ್ಟಿದ್ದು, ನಾನು ನಾಮಪತ್ರ ಸಲ್ಲಿಸಿ ಎಲ್ಲೆ ಕುಳಿತರು ಜನತೆ ನನ್ನನ್ನು ಗೆಲ್ಲಿಸಲಿದ್ದಾರೆ ಎಂದು ಅನರ್ಹ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.

ರವಿವಾರ ಗೋಕಾಕ್ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನನ್ನು ಗೆಲ್ಲಿಸುವ ಶಕ್ತಿ ಕ್ಷೇತ್ರದ ಜನರಿಗೆ ಇದೆ. ನಾನು ಕ್ಷೇತ್ರದ ಜನತೆ ವಿಶ್ವಾಸ ಗಳಿಸಿದ್ದು, ನೆರೆ ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡಿದ್ದೇನೆ ಎಂದು ತಿಳಿಸಿದರು.

ಕಾನೂನಿನ ಪ್ರಕಾರ ನಾನು ಅನರ್ಹ ಆಗಿರಬಹುದು. ಆದರೆ, ಗೋಕಾಕ್ ಕ್ಷೇತ್ರದ ಜನರ ಪಾಲಿಗೆ ಯಾವತ್ತಿಗೂ ಅರ್ಹನೇ. ಜನ ನನ್ನ ಹಿಂದೆ ಇರುವವರೆಗೂ ಯಾರೂ ಏನು ಮಾಡಲು ಸಾಧ್ಯವಿಲ್ಲ. ಗೋಕಾಕ್ ಸಾಮ್ರಾಜ್ಯವನ್ನು ಕಟ್ಟಿದ್ದು ನನ್ನ ತಂದೆ. ಸತೀಶ್ ಜಾರಕಿಹೊಳಿ ಟೋಪಿ ಹಾಕಿಕೊಂಡು ಕ್ಷೇತ್ರದಲ್ಲಿ ಪ್ರಚಾರ ಮಾಡಿದರೂ ಗೆಲ್ಲುವುದು ನಾನೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದುಕೊಂಡು ವಸ್ತು ಯಾವುದು ಹೇಳಲಿ: ನಾನು ಒಂದು ವಸ್ತು ಕಳೆದುಕೊಂಡಿದ್ದೇನೆ ಎಂದು ಸತೀಶ್ ಜಾರಕಿಹೊಳಿ ಪದೇ, ಪದೇ ಹೇಳುತ್ತಿದ್ದಾರೆ. ಆ ವಸ್ತು ಯಾವುದು ಎಂದು ಬಹಿರಂಗಪಡಿಸಲಿ ಎಂದು ರಮೇಶ್ ಜಾರಕಿಹೊಳಿ ಇದೇ ವೇಳೆ ಆಗ್ರಹಿಸಿದರು.

ಯಾವ ವೇದಿಕೆಯ ಮೇಲೆ ಬಂದು ಸತೀಶ್ ಹೇಳುತ್ತಾನೆ ಎನ್ನುವುದನ್ನು ನಾನೂ ನೋಡುತ್ತೇವೆ. ಅದೇ ವೇದಿಕೆಯಲ್ಲಿ ನಾನೂ ಯಾರೂ ಎಂದೂ ಆತನಿಗೆ ತೋರಿಸುವೆ ಎಂದು ಸವಾಲು ಹಾಕಿದ ಅವರು, ಸತೀಶ್ ಮಾಡಿರುವ ಅಕ್ರಮಗಳ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ ಎಂದು ಆಕ್ರೋಶ ಹೊರಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News