ಮೆಟ್ರೋ ಕಾಮಗಾರಿಯಿಂದ ಹಾಳಾದ ರಸ್ತೆಗಳ ದುರಸ್ತಿಗೆ ಬಿಎಂಆರ್‌ಸಿಎಲ್ ತಯಾರಿ

Update: 2019-09-24 12:44 GMT

ಬೆಂಗಳೂರು, ಸೆ.24: ಮೆಟ್ರೋ ಕಾಮಗಾರಿಯಿಂದಾಗಿ ಹಾಳಾಗಿರುವ ರಸ್ತೆಗಳ ದುರಸ್ತಿಗೆ ಬಿಎಂಆರ್‌ಸಿಎಲ್ ಮುಂದಾಗಿದ್ದು, ಮೊದಲ ಹಂತದಲ್ಲಿ ನಾಯಂಡಹಳ್ಳಿ ಮೆಟ್ರೋ ನಿಲ್ದಾಣದಿಂದ ನೈಸ್ ರಸ್ತೆ ಜಕ್ಷಂನ್‌ವರೆಗೆ ರಸ್ತೆ ದುರಸ್ತಿಗೆ ಯೋಜನೆ ರೂಪಿಸಲಾಗಿದೆ.

ನಮ್ಮ ಮೆಟ್ರೋ ಕಾಮಗಾರಿಯಿಂದಾಗಿ ನಗರದ ಹಲವು ರಸ್ತೆಗಳು ಹಾಳಾಗಿದ್ದು, ಸವಾರರು ಸಂಚಾರ ಮಾಡಲು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ರಸ್ತೆಗಳ ದುರಸ್ತಿಗೆ ಮುಂದಾಗಿದ್ದು, ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.

ಕಳೆದ ಎರಡು ವರ್ಷಗಳ ಹಿಂದಿ ನಾಯಂಡಹಳ್ಳಿ ಮೆಟ್ರೋ ನಿಲ್ದಾಣದ ಬಳಿ ವಾಹನ ಸವಾರರು ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದರು. ಮೆಟ್ರೋ ಕಾಮಗಾರಿಯಿಂದಾಗಿ ಹಾಳಾಗಿರುವ ರಸ್ತೆಗಳ ದುರಸ್ತಿಗೊಳಿಸಬೇಕು ಎಂದು ಸರಕಾರವೂ ಬಿಎಂಆರ್‌ಸಿಎಲ್‌ಗೆ ಸೂಚನೆಯನ್ನು ನೀಡಿತ್ತು. ಅನಂತರ ತೇಪೆ ಹಚ್ಚುವ ಕೆಲಸ ಮಾಡಲಾಗಿತ್ತು.

ಇದೀಗ ಸಂಪೂರ್ಣ ರಸ್ತೆ, ಚರಂಡಿಗಳ ದುರಸ್ತಿಗೆ ಬಿಎಂಆರ್‌ಸಿಎಲ್ ಯೋಜನೆ ರೂಪಿಸಿದೆ. ನಾಯಂಡಹಳ್ಳಿ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಬಳಿಯ ನೈಸ್ ರಸ್ತೆ ಜಂಕ್ಷನ್‌ವರೆಗಿನ 8 ಕಿ.ಮೀ.ಮಾರ್ಗದ ರಸ್ತೆಯನ್ನು ಮರು ನಿರ್ಮಾಣ ಮಾಡುವುದು, ಎರಡೂ ಬದಿಯ ಚರಂಡಿ, ರಸ್ತೆ ವಿಭಜಕಗಳ ದುರಸ್ತಿ ಕಾರ್ಯ ಮಾಡಲಾಗುತ್ತದೆ. ಅದಕ್ಕಾಗಿ 10 ಕೋಟಿ ರೂ.ಗಳು ವ್ಯಯಿಸಲಿದ್ದು, ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಗುತ್ತಿಗೆ ಸಂಸ್ಥೆ ನಿಗದಿಯಾದ ಬಳಿಕ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತದೆ ಎಂದು ನಿಗಮ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News