ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ: ಅ.1ರಿಂದ ಮತದಾರರ ಪಟ್ಟಿ ಪರಿಷ್ಕರಣೆ

Update: 2019-09-24 14:13 GMT

ಬೆಂಗಳೂರು, ಸೆ.24: ಮುಂದಿನ ಜನವರಿ-2020ರಲ್ಲಿ ವಿಧಾನಪರಿಷತ್‌ನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯ ಹಿನ್ನೆಲೆಯಲ್ಲಿ ಅ.1ರಿಂದ ನ.6ರವರೆಗೆ ಮತದಾರರ ಪಟ್ಟಿ ಪರಿಷ್ಕರಣೆ ಆರಂಭಗೊಳ್ಳಲಿದೆ. ಈ ಹಿಂದೆ ನೋಂದಣಿ ಮಾಡಿಕೊಂಡಿರುವವರು ಸಹ ಹೊಸದಾಗಿ ನೋಂದಾಯಿಸಿಕೊಳ್ಳುವುದು ಕಡ್ಡಾಯವೆಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್ ತಿಳಿಸಿದ್ದಾರೆ.

ಮಂಗಳವಾರ ಚುನಾವಣಾ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆಗ್ನೇಯ ಪದವೀಧರ, ಪಶ್ಚಿಮ ಪದವೀಧರ, ಈಶಾನ್ಯ ಶಿಕ್ಷಣ ಕ್ಷೇತ್ರ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರಗಳಿಗೆ ಚುನಾವವಣೆ ನಡೆಯುತ್ತಿರುವುದರಿಂದ ಮತದಾರರ ಪಟ್ಟಿಗೆ ಚಾಲನೆ ನೀಡಲಾಗಿದೆ ಎಂದರು.

ನ.6 ಮತದಾರರ ಪಟ್ಟಿಗೆ ಸೇರುವುದಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ನ.19ರಂದು ಕರಡು ಮತದಾರರ ಪಟ್ಟಿ ಮುದ್ರಣಗೊಳ್ಳಲಿದೆ. ನ.23ಕ್ಕೆ ಕರಡು ಪಟ್ಟಿಯನ್ನು ಪ್ರಕಟಿಸಲಾಗುವುದು. ಅಂದಿನಿಂದ ಡಿ.9ರವರೆಗೆ ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದು. ಡಿ.30ರಂದು ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.

ಪದವೀಧರ ಕ್ಷೇತ್ರದ ಆರ್.ಚೌಡರೆಡ್ಡಿ ತೋಪಲ್ಲಿ ಅವಧಿ 2020ಕ್ಕೆ ಪೂರ್ಣಗೊಳ್ಳುವುದರಿಂದ ತೆರವಾಗುವ ಆಗ್ನೇಯ ಪದವೀಧರ ಕ್ಷೇತ್ರ ಚಿತ್ರದುರ್ಗ, ದಾವಣಗೆರೆ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಒಳಗೊಂಡಿರುತ್ತದೆ. ಹಾಗೆಯೇ ಎಸ್.ವಿ.ಸಂಕನೂರು ಅವಧಿ ಮುಕ್ತಾಯಗೊಳ್ಳುವುದರಿಂದ ತೆರವಾಗಿರುವ ಪಶ್ಚಿಮ ಪದವೀಧರ ಕ್ಷೇತ್ರ ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿದೆ ಎಂದು ಅವರು ಹೇಳಿದರು.

ಶರಣಪ್ಪ ಮಟ್ಟೂರು ಅವಧಿ 2020ಕ್ಕೆ ಪೂರ್ಣಗೊಳ್ಳುವುದರಿಂದ ತೆರವಾಗಿರುವ ಈಶಾನ್ಯ ಶಿಕ್ಷಕರ ಕ್ಷೇತ್ರ ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆ ಒಳಗೊಂಡಿರುತ್ತದೆ. ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಿಗೆ ಒಳಪಡುತ್ತದೆ ಎಂದು ಅವರು ಮಾಹಿತಿ ನೀಡಿದರು.

ಈ ಎಲ್ಲಾ ಕ್ಷೇತ್ರಗಳ ವ್ಯಾಪ್ತಿಯ ಪ್ರಾದೇಶಿಕ ಆಯುಕ್ತರು, ಮತದಾರರ ಪಟ್ಟಿ ಪರಿಷ್ಕರಣೆಯ ನೋಡಲ್ ಅಧಿಕಾರಿ ಆಗಿರುತ್ತಾರೆ. ಜಿಲ್ಲಾಧಿಕಾರಿಗಳು ಸಹಾಯಕ ನೋಡಲ್ ಅಧಿಕಾರಿಗಳಾಗಿರುತ್ತಾರೆ. ಶಿಕ್ಷಕರ ಕ್ಷೆತ್ರಕ್ಕೆ ನೋಂದಣಿ ಮಾಡುವವರು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ ತಾವು ವಾಸವಿರುವ ಜಾಗದಲ್ಲೇ ನೋಂದಣಿಗೆ ಅರ್ಜಿ ಸಲ್ಲಿಸಬೇಕು. ಮೂರು ವರ್ಷ ಪೂರ್ಣಾವಧಿ ಶಿಕ್ಷಕರಾಗಿ ಕೆಲಸ ಮಾಡಿರುವ ಪ್ರಮಾಣಪತ್ರ ಹಾಜರುಪಡಿಸಬೇಕೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News