ಪಂಜಾಬ್ ನಲ್ಲಿ ಚೀನಾ ನಿರ್ಮಿತ ಡ್ರೋನ್ ಮೂಲಕ ಶಸ್ತ್ರಾಸ್ತ್ರ ಇಳಿಸುತ್ತಿರುವ ಪಾಕ್ ಉಗ್ರರು

Update: 2019-09-25 04:05 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಸೆ.25: ಪಾಕಿಸ್ತಾನ ಮೂಲದ ಖಲಿಸ್ತಾನಿ ಭಯೋತ್ಪಾದಕ ಗುಂಪುಗಳ ಮೂಲಕ ಸೆಪ್ಟೆಂಬರ್ 9ರಿಂದ 16ರ ನಡುವೆ ಚೀನಾ ನಿರ್ಮಿತ ಎಂಟು ಡ್ರೋನ್ ಮೂಲಕ 80 ಕೆ.ಜಿ. ಶಸ್ತ್ರಾಸ್ತ್ರಗಳನ್ನು ಪಂಜಾಬ್‌ನಲ್ಲಿ ಇಳಿಸಲಾಗಿದೆ ಎಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಭದ್ರತಾ ಏಜೆನ್ಸಿಗಳು ಮತ್ತು ಪಂಜಾಬ್ ಪೊಲೀಸರು ಇದನ್ನು ದೃಢಪಡಿಸಿದ್ದಾರೆ.

ಖಲಿಸ್ತಾನ ಜಿಂದಾಬಾದ್ ಫೋರ್ಸ್ (ಕೆಝೆಡ್‌ಎಫ್) ಜಾಲವನ್ನು ಬಳಸಿಕೊಂಡು ಇದನ್ನು ರವಾನಿಸಲಾಗಿದ್ದು, ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆಯಾದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ), ಜರ್ಮನಿ ಮತ್ತು ಲಾಹೋರ್ ಮೂಲಕ ಇದನ್ನು ಕಾರ್ಯಗತಗೊಳಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರದಾಳಿಗೆ ಕುಮ್ಮಕ್ಕು ನೀಡುವುದು ಇದರ ಉದ್ದೇಶ ಎಂದು ತಿಳಿದುಬಂದಿದೆ.

ಪಂಜಾಬ್‌ನ ತರಣ್ ತರಣ್ ಜಿಲ್ಲೆಯಲ್ಲಿ ಸೆಪ್ಟೆಂಬರ್ 22ರಂದು ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುವ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಅಮೃತಸರ ಮತ್ತು ತರಣ್ ತರಣ್‌ನಲ್ಲಿ ಒಟ್ಟು ಎಂಟು ಪೇಲೋಡ್ ಶಸ್ತ್ರಾಸ್ತ್ರಗಳನ್ನು ಡ್ರೋನ್ ಗಳು ಇಳಿಸಿವೆ.

ಸುಭ್‌ದೀಪ್ ಎಂಬ 22 ವರ್ಷದ ಯುವಕ ಸೇರಿದಂತೆ ಈ ಸಂಬಂಧ ಪಂಜಾಬ್ ಪೊಲೀಸರು ಇದುವರೆಗೆ ಐದು ಮಂದಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿ ಮಾನ್‌ಸಿಂಗ್ ಹಾಗೂ ಅಕ್ಷದೀಪ್ ಎಂಬುವವರು ಈತನನ್ನು ಉಗ್ರ ಸಂಘಟನೆಗೆ ಸೆಳೆದಿದ್ದರು ಎಂದು ವಿವರಿಸಿದ್ದಾರೆ. ಇತರ ನಾಲ್ಕು ಮಂದಿಯನ್ನು ರವಿವಾರ ಚೋಹ್ಲಾಸಾಹಿಬ್ ಗ್ರಾಮದಲ್ಲಿ ಬಂಧಿಸಲಾಗಿತ್ತು.

ಗಡಿಯೊಳಗೆ ಈ ಶಸ್ತ್ರಾಸ್ತ್ರಗಳನ್ನು ಇಳಿಸಲು ಚೀನಾ ನಿರ್ಮಿತ ವಾಣಿಜ್ಯ ಡ್ರೋನ್ ಗಳನ್ನು ಬಳಸಲಾಗಿದ್ದು, ಇವು ತಲಾ 10 ಕೆ.ಜಿ. ಪೇಲೋಡ್‌ಗಳನ್ನು ಹೊತ್ತುತಂದಿವೆ. ಈ ಡ್ರೋನ್ ಗಳನ್ನು ಗಡಿಯಾಚೆ ಪಾಕಿಸ್ತಾನದ ಪ್ರದೇಶದಲ್ಲಿ ಎರಡು ಕಿಲೋಮೀಟರ್ ದೂರದಿಂದ ಹಾರಿಸಲಾಗಿದೆ. ಎರಡು ಸಾವಿರ ಅಡಿ ಎತ್ತರದಲ್ಲಿ ಐದು ಕಿಲೋಮೀಟರ್ ಸಾಗಿ ಬಂದಿವೆ. 1,200 ಅಡಿ ಇಳಿದು ಈ ಶಸ್ತ್ರಾಸ್ತ್ರಗಳನ್ನು ಇಳಿಸಿವೆ ಎನ್ನುವುದು ತನಿಖೆಯಿಂದ ಗೊತ್ತಾಗಿದೆ. ಚೀನಿ ನಿರ್ಮಿತ ಪರ್ವತಾಹೋರಣಕ್ಕೆ ಬಳಸುವ ಹಗ್ಗಗಳನ್ನು ಬಳಸಿಕೊಂಡು ಪ್ಲಾಟ್‌ಫಾರಂ ಮೂಲಕ ಇವುಗಳನ್ನು ಕೆಳಕ್ಕೆ ಇಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News