ಐಎಂಎ ಮಾದರಿಯ ‘ಯಲ್ಲೋ ಎಕ್ಸ್‌ಪ್ರೆಸ್’ ಕಂಪೆನಿ ವಂಚನೆ ಪ್ರಕರಣದ ತನಿಖೆ ಸಿಐಡಿಗೆ: ಸಚಿವ ಆರ್.ಅಶೋಕ್

Update: 2019-09-25 14:01 GMT

ಬೆಂಗಳೂರು, ಸೆ. 25: ‘ಐಎಂಎ ಮಾದರಿಯಲ್ಲಿ ಜನ ಸಾಮಾನ್ಯರಿಗೆ ವಂಚನೆ ಮಾಡುತ್ತಿದ್ದ ಕೇರಳ ಮೂಲದ ‘ಯಲ್ಲೋ ಎಕ್ಸ್‌ಪ್ರೆಸ್ ಕಂಪೆನಿ’ ಅವ್ಯವಹಾರಗಳನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಯಲ್ಲೋ ಎಕ್ಸ್‌ಪ್ರೆಸ್ ಕಂಪೆನಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಆರು ಕಂಪೆನಿಗಳನ್ನು ತೆರೆದು ಜನರಿಂದ ಹಣ ಪಡೆದು ವಂಚನೆ ಮಾಡಿರುವುದು ಗೊತ್ತಾಗಿದೆ. ಈ ಪ್ರಕರಣದ ತನಿಖೆ ಸಿಐಡಿಗೆ ವಹಿಸಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.

ಅಮಾಯಕರಿಗೆ ವಂಚಿಸುವ ಇಂತಹ ಹಣಕಾಸು ಕಂಪೆನಿಗಳನ್ನು ನಿರ್ಮೂಲನೆ ಮಾಡಲಾಗುವುದು. ಯಾವುದೇ ಕಾರಣಕ್ಕೂ ವಂಚನೆ ಮಾಡುವ ಕಂಪೆನಿಗಳನ್ನು ರಾಜ್ಯದಲ್ಲಿ ತಲೆ ಎತ್ತಲು ಬಿಡುವುದಿಲ್ಲ. ಈ ಬಗ್ಗೆ ಅಧಿಕಾರಿಗಳ ನಿಗಾ ವಹಿಸಲಿದ್ದಾರೆ ಎಂದರು.

ಯಲ್ಲೊ ಎಕ್ಸ್‌ಪ್ರೆಸ್ ಕಂಪೆನಿ ಒಂದು ವರ್ಷದ ಹಿಂದೆ ಕಾರ್ಯಾರಂಭ ಮಾಡಿದ್ದು, 2 ಸಾವಿರ ಜನರಿಂದ ಸುಮಾರು 40ರಿಂದ 50 ಕೋಟಿ ರೂ.ಗಳಷ್ಟು ಹಣ ಸಂಗ್ರಹಿಸಿ ವಂಚನೆ ಎಸಗಿದೆ ಎಂದ ಅವರು, ಒಬ್ಬ ವ್ಯಕ್ತಿ 2ರಿಂದ 2.50ಲಕ್ಷ ರೂ. ನೀಡಿದರೆ ಆತನಿಗೆ ಪ್ರತಿ ತಿಂಗಳು 10 ರಿಂದ 25 ಸಾವಿರ ರೂ.ನೀಡುವ ಆಮಿಷವೊಡ್ಡಿ ವಂಚನೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಅಶೋಕ್ ವಿವರಿಸಿದರು.

ಸಾಮಾನ್ಯ ಜನರಿಂದ ಹಣ ಪಡೆದು ಅವರ ಹೆಸರಿನಲ್ಲಿ ಕ್ಯಾಬ್ ಖರೀದಿ ಮಾಡಿ ಅದನ್ನು ವೋಲಾ, ಉಬರ್ ಕಂಪೆನಿಗೆ ನೀಡಿ ಪ್ರತಿ ತಿಂಗಳು ಹಣ ನೀಡುತ್ತೇವೆ ಎಂದು ಈ ಕಂಪೆನಿ ಹೇಳಿದೆ. ಆದರೆ, ಕಾರುಗಳನ್ನು ಜನರ ಹೆಸರಿನಲ್ಲಿ ಖರೀದಿ ಮಾಡಿಲ್ಲ. ಕಾರುಗಳನ್ನು ಕಂಪೆನಿಯ ಹೆಸರಿನಲ್ಲೇ ಖರೀದಿ ಮಾಡಿದ್ದು, 200 ಕಾರುಗಳನ್ನು ಮಾತ್ರ ಉಬರ್‌ಗೆ ಬಿಡಲಾಗಿದೆ.

ಈ ವಂಚನೆಯ ಬಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ರವೀಂದ್ರ, ಪೊಲೀಸ್ ವರಿಷ್ಠಾಧಿಕಾರಿ ರವಿ ಚನ್ನಣ್ಣನವರ್ ಸೇರಿದಂತೆ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದು, ಪ್ರಕರಣದ ಸಮಗ್ರ ತನಿಖೆ ದೃಷ್ಟಿಯಿಂದ ಸಿಐಡಿ ವಹಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯದ ವಿವಿಧೆಡೆಗಳಲ್ಲಿ ಅಕ್ರಮ ಕಂಪೆನಿಗಳು ಕಾರ್ಯ ನಿರ್ವಹಿಸುತ್ತಿದ್ದು, ಇಂತಹ ಎಲ್ಲ ಕಂಪೆನಿಗಳ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದ ಅವರು, ಅನಧಿಕೃತ ಕಂಪೆನಿಗಳಿಗೆ ಕಡಿವಾಣ ಹಾಕಲಾಗುವುದು ಎಂದರು.

ಕೇರಳ ಮೂಲದ ಯಲ್ಲೋ ಎಕ್ಸ್‌ಪ್ರೆಸ್ ಕಂಪೆನಿಯ ಮುಖ್ಯಸ್ಥರಾದ ರಮಿತ್ ಮಲ್ವೋತ್ರ, ಜೋಜೋ ಥಾಮಸ್, ಮಾಗಿ ನಾಯರ್ ಸೇರಿದಂತೆ ಇನ್ನಿತರರ ಬಂಧನಕ್ಕೂ ಕ್ರಮ ಕೈಗೊಳ್ಳಲಾಗಿದೆ. ಕಾನೂನು ರೀತಿಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಅಶೋಕ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News