ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸಹಕಾರ: ಮುಖ್ಯಮಂತ್ರಿ ಯಡಿಯೂರಪ್ಪ

Update: 2019-09-25 14:10 GMT

ಬೆಂಗಳೂರು, ಸೆ.25: ನಗರದಲ್ಲಿ ವಾಸಿಸುತ್ತಿರುವ ಸ್ಲಮ್ ನಿವಾಸಿಗಳಿಗೆ ಬಹುಮಹಡಿ ವಸತಿ ನಿಲಯಗಳನ್ನು ನಿರ್ಮಿಸಲು ಸರಕಾರದೊಂದಿಗೆ ಕೈಜೋಡಿಸುವ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಆರ್ಥಿಕ ಸಹಾಯ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. 

ಬುಧವಾರ ರಾಷ್ಟ್ರೀಯ ರಿಯಲ್ ಎಸ್ಟೇಟ್ ಅಭಿವೃದ್ಧಿಯ ಮಂಡಳಿ ವತಿಯಿಂದ ಕರ್ನಾಟಕ ರಾಜ್ಯ, ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಬಿಲ್ಡರ್ ಮತ್ತು ಡೆವಲಪರ್ಸ್‌ಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರಕಾರ 1 ಸಾವಿರ ಕೋಟಿ ರೂ. ವೆಚ್ಚದಲ್ಲಿ ಸ್ಲಮ್ ನಿವಾಸಿಗಳಿಗೆ ಬಹುಮಹಡಿ ವಸತಿ ಸಮುಚ್ಛಯಗಳನ್ನು ನಿರ್ಮಿಸಲು ಉದ್ದೇಶಿಸಿದೆ. ಆ ಮೂಲಕ ರಿಯಲ್ ಎಸ್ಟೇಟ್ ಉದ್ಯಮದ ಪುನಃಶ್ಚೇತನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ರಿಯಲ್ ಎಸ್ಟೇಟ್ ಕ್ಷೇತ್ರ ಸದ್ಯ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಸರಕಾರ ಸಿದ್ಧವಿದೆ. ಉದ್ಯಮದ ಕಾರ್ಯನಿರ್ವಹಣೆಯ ವೇಳೆ ಸರಕಾರಿ ಅಧಿಕಾರಿಗಳು ಅಡಚಣೆ ಉಂಟು ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು. ಹಾಗೂ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಅವರು ಭರವಸೆ ನೀಡಿದರು.

2022ರ ವೇಳೆಗೆ ಪ್ರತಿಯೊಬ್ಬರಿಗೆ ಸೂರು ಕಲ್ಪಿಸಲು ಕೇಂದ್ರ ಸರಕಾರ ಮಹತ್ವದ ಯೋಜನೆಯನ್ನು ರೂಪಿಸಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರಕಾರವು ಅಂಬೇಡ್ಕರ್, ಬಸವ, ದೇವರಾಜ ಅರಸು, ಮತ್ತಿತರ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ 2824 ಕೋಟಿ ರೂ.ವನ್ನು ಖರ್ಚು ಮಾಡಲಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ರಿಯಲ್ ಎಸ್ಟೇಟ್ ಅಭಿವೃದ್ಧಿಯ ಮಂಡಳಿಯ ಅಧ್ಯಕ್ಷ ನಿರಂಜನ್ ಹಿರಾನಂದಾನಿ ಮಾತನಾಡಿ, ಕೇಂದ್ರ ಸರಕಾರ ಕಾರ್ಪೊರೇಟ್ ಮೇಲಿನ ತೆರಿಗೆಯನ್ನು ಶೇ.22ಕ್ಕೆ ಇಳಿಸಿರುವುದು ಉತ್ತೇಜನಕಾರಿಯಾಗಿದೆ. ಇದರಿಂದ ರಿಯಲ್ ಎಸ್ಟೇಟ್ ಉದ್ಯಮ ಚೇತರಿಕೆ ಕಾಣುವುದಕ್ಕೆ ಸಹಾಯಕವಾಗಲಿದೆ ಎಂದರು.

ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ಉದ್ಯಮದ ಅಭಿವೃದ್ದಿಗೆ ಸಾಕಷ್ಟು ಅವಕಾಶಗಳಿವೆ. ಬೆಂಗಳೂರಿಗೆ ಸಮೀಪವಿರುವ ಮೈಸೂರು ನಗರ ಕೈಗಾರಿಕೆಗಳ ಸ್ಥಾಪನೆಗೆ ಉತ್ತಮ ವಾತಾವರಣವನ್ನು ಒಳಗೊಂಡಿದೆ. ಹೀಗಾಗಿ ಸರಕಾರ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಉದ್ಯಮದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ರಿಯಲ್ ಎಸ್ಟೇಟ್ ಅಭಿವೃದ್ಧಿಯ ಮಂಡಳಿಯ ರಾಜ್ಯಾಧ್ಯಕ್ಷ ಸತೀಶ್‌ಕುಮಾರ್ ಮಾತನಾಡಿ, ಸದ್ಯದ ಮಟ್ಟಿಗೆ ಮಾತ್ರ ರಿಯಲ್ ಎಸ್ಟೇಟ್ ಉದ್ಯಮದ ಬೆಳವಣಿಗೆಯಲ್ಲಿ ಕುಂಠಿತ ಕಾಣುತ್ತಿರಬಹುದು. ಆದರೆ, ಕೆಲವೇ ವರ್ಷಗಳಲ್ಲಿ ಚೇತರಿಕೆ ಕಾಣುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದು ತಿಳಿಸಿದರು.

ಬೆಂಗಳೂರಿನಲ್ಲಿಯೇ ಕೃಷಿಯೇತರ ಭೂಮಿ ಸಾಕಷ್ಟಿದೆ. ಹಾಗೂ ಬೆಂಗಳೂರು-ಮೈಸೂರು ರಸ್ತೆಯಲ್ಲೂ ಸಾಕಷ್ಟು ಇಂತಹ ಭೂಮಿಯಿದೆ. ಇದನ್ನು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಪೂರಕವಾಗಿ ಬದಲಾವಣೆಗಳನ್ನು ಮಾಡಿದರೆ, ಉದ್ಯಮದ ಬೆಳವಣಿಗೆ ಹಾಗೂ ಆ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು. ಈ ವೇಳೆ ಕಾರ್ಯದರ್ಶಿ ಸುಜಿತ್ ಕುಮಾರ್, ಪ್ರವೀಣ್ ಜೈನ್, ಪ್ರೇಮ್‌ಕುಮಾರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News