ಶಿವಾಜಿನಗರ ಕ್ಷೇತ್ರ ಉಪ ಚುನಾವಣೆ: ರಿಝ್ವಾನ್ ಹೆಸರು ಮುನ್ನೆಲೆಗೆ, ತೀವ್ರ ವಿರೋಧ ?

Update: 2019-09-25 15:03 GMT

ಬೆಂಗಳೂರು, ಸೆ.25: ಶಿವಾಜಿನಗರ ಉಪಚುನಾವಣೆ ಪ್ರಕ್ರಿಯೆ ಚುರುಕುಗೊಂಡಿದ್ದು, ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಆಕಾಂಕ್ಷಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದರಲ್ಲಿ ಮುಖ್ಯವಾಗಿ ಇತ್ತೀಚಿಗೆ ಲೋಕಸಭೆ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿ ರಿಝ್ವಾನ್ ಅರ್ಶದ್ ಹೆಸರು ಮುನ್ನೆಲೆಗೆ ಬರುತ್ತಿರುವ ಹಿನ್ನೆಲೆ ಸ್ಥಳೀಯ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 

ಬುಧವಾರ ಸಂಜೆ ಕೆಪಿಸಿಸಿ ಕಚೇರಿಯಲ್ಲಿ ದಿನೇಶ್‌ ಗುಂಡೂರಾವ್ ನೇತೃತ್ವದಲ್ಲಿ ಶಿವಾಜಿನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಕರೆಯಲಾಗಿತ್ತು. ಆದರೆ, ಸಭೆಯಲ್ಲಿ ರಿಝ್ವಾನ್ ಅರ್ಶದ್ ಅವರಿಗೆ ಟಿಕೆಟ್ ನೀಡಬಾರದು, ಒಂದು ವೇಳೆ ಟಿಕೆಟ್ ನೀಡಿದರೆ ಬಂಡಾಯವೇಳುವ ಸಾಧ್ಯತೆ ಇದೆ ಎಂದು ಸ್ಥಳೀಯರ ನಾಯಕರು ಪಕ್ಷದ ಮುಖಂಡರಿಗೆ ಎಚ್ಚರಿಕೆ ನೀಡಿದರು ಎಂದು ತಿಳಿದುಬಂದಿದೆ.

ಈ ಹಿಂದೆ ಮಾಜಿ ಸಚಿವ ರೋಶನ್ ಬೇಗ್ ಸ್ಪರ್ಧಿಸುತ್ತಿದ್ದ ಕಾರಣ, ಶಿವಾಜಿನಗರ ಕ್ಷೇತ್ರದ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿಲ್ಲ. ಆದರೆ, ಈಗ ಪರಿಸ್ಥಿತಿ ಬದಲಾವಣೆ ಆಗಿದ್ದು, ಸ್ಥಳೀಯ ಬಿಬಿಎಂಪಿ ಸದಸ್ಯರು, ಪಕ್ಷದ ಹಿರಿಯ ನಾಯಕರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಹೀಗಿರುವಾಗ ಹೊರಗಿನ ವ್ಯಕ್ತಿಗಳಿಗೆ ಟಿಕೆಟ್ ನೀಡಿದರೆ, ಚುನಾವಣೆಯಲ್ಲಿ ಸಮನ್ವಯತೆ ಕೊರತೆಯಾಗಲಿದೆ ಎಂದು ಸ್ಥಳೀಯ ಮುಖಂಡರೊಬ್ಬರು ಸಭೆಯಲ್ಲಿ ಅನಿಸಿಕೆ ಹಂಚಿಕೊಂಡರು ಎಂದು ಹೇಳಲಾಗುತ್ತಿದೆ.

ಪಕ್ಷೇತರ ಅಭ್ಯರ್ಥಿ?: ಕಾಂಗ್ರೆಸ್ ಟಿಕೆಟ್‌ನ ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬರಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಅವರು, ತಮಗೆ ಟಿಕೆಟ್ ಕೈ ತಪ್ಪಿದರೆ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವೆ. ಅಷ್ಟೇ ಅಲ್ಲದೆ, ಶುಕ್ರವಾರ(27) ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ, ಫ್ರೇಜರ್‌ಟೌನ್‌ನ ಪಾಲಿಕೆ ಸದಸ್ಯ ಎ.ಆರ್.ಝಾಕೀರ್, ಭಾರತಿನಗರ ವಾರ್ಡ್ ಸದಸ್ಯ ಶಕೀಲ್ ಅಹ್ಮದ್, ಶಿವಾಜಿನಗರ ವಾರ್ಡ್‌ನ ಪಾಲಿಕೆ ಸದಸ್ಯೆಯ ಪತಿ ಇಶ್ತಿಯಾಕ್, ಮಾಜಿ ಪಾಲಿಕೆ ಸದಸ್ಯ ಸಯ್ಯದ್ ಶುಜಾವುದ್ದೀನ್ ಮುಂಚೂಣಿಯಲ್ಲಿದ್ದು, ಕ್ಷೇತ್ರದ ಹೊರ ವ್ಯಕ್ತಿಗಳಿಗೆ ಟಿಕೆಟ್ ನೀಡಬೇಡಿ ಎಂದು ಈಗಾಗಲೇ ವರಿಷ್ಠರಿಗೆ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

‘ಗೆಲುವು ಕಷ್ಟಕರ’

ಹಲವು ವರ್ಷಗಳಿಂದ ಶಿವಾಜಿನಗರ ಕಾಂಗ್ರೆಸ್ ಅಭ್ಯರ್ಥಿಗಾಗಿ ದುಡಿದಿದ್ದೇವೆ. ಈಗ ಆ ಅಭ್ಯರ್ಥಿ ಅನರ್ಹ ಆಗಿದ್ದಾರೆ. ಹೀಗಿರುವಾಗ, ಸ್ಥಳೀಯರಿಗೆ ಪಕ್ಷ ಟಿಕೆಟ್ ನೀಡಬೇಕು. ಆದರೆ, ಹೊರಗಿನ ಅಭ್ಯರ್ಥಿಗೆ ಮಣೆ ಹಾಕಿದರೆ, ಗೆಲುವು ಕಷ್ಟಕರ ಎನ್ನುತ್ತಾರೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತ ನಜೀರ್ ಅಹ್ಮದ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News