ನೌಕಾ ಕಾರ್ಯಾಚರಣೆಗೆ ಮುಂದಾದ ಪಾಕ್: ಭಾರತ ಹದ್ದಿನ ಕಣ್ಣು

Update: 2019-09-26 03:40 GMT

ಹೊಸದಿಲ್ಲಿ: ಕ್ಷಿಪಣಿ ಮತ್ತು ರಾಕೆಟ್ ಉಡಾವಣೆ, ಸಮರ ಕೌಶಲ ಸೇರಿದಂತೆ ಉತ್ತರ ಅರಬ್ಬಿ ಸಮುದ್ರದಲ್ಲಿ ಪಾಕಿಸ್ತಾನ ಪ್ರಮುಖ ನೌಕಾ ಕಾರ್ಯಾಚರಣೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಭಾರತದ ಈ ಕಾರ್ಯಾಚರಣೆ ಬಗ್ಗೆ ಹದ್ದಿನ ಕಣ್ಣು ಇಟ್ಟಿದೆ. ಇದಕ್ಕಾಗಿ ಯುದ್ಧನೌಕೆಗಳು, ಸಬ್‍ಮೆರಿನ್, ಕಡಲು ಗಸ್ತು ವಿಮಾನ ಮತ್ತು ಯುದ್ಧ ವಿಮಾನಗಳನ್ನು ಮುಂಚೂಣಿಗೆ ನಿಯೋಜಿಸಿದೆ.

ಪಾಕ್ ಕಾರ್ಯಾಚರಣೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಯಾವುದೇ ದುಸ್ಸಾಹಸವನ್ನು ತಡೆಯುವ ಸಲುವಾಗಿ ಭಾರತದ ಸಶಸ್ತ್ರ ಪಡೆಗಳನ್ನು ಸರ್ವಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ರಕ್ಷಣಾ ಮೂಲಗಳು ಹೇಳಿವೆ. ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕಿತ್ತುಹಾಕಿದ ಬಳಿಕ ಪಾಕಿಸ್ತಾನದ ಸರ್ಕಾರಿ ಅಥವಾ ಸರ್ಕಾರೇತರ ಸಂಘಟನೆಗಳಿಂದ ದಾಳಿಯ ಅಪಾಯ ಸಾಧ್ಯತೆ ಹೆಚ್ಚಿದೆ. ಪಾಕಿಸ್ತಾನದ ಕಾರ್ಯಾಚರಣೆ ಮಾಮೂಲಿನದ್ದಾದರೂ, ಅದರ ಉದ್ದೇಶಗಳು ಕ್ಷಿಪ್ರವಾಗಿ ಬದಲಾಗಬಹುದು ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಸೆಪ್ಟೆಂಬರ್ 25 ಮತ್ತು 29ರ ನಡುವೆ ಉತ್ತರ ಅರಬ್ಬಿ ಸಮುದ್ರದಲ್ಲಿ ಕ್ಷಿಪಣಿ, ರಾಕೆಟ್ ಉಡಾವಣೆ ಮತ್ತು ಗುಂಡು ಹಾರಿಸುವ ಕಾರ್ಯಾಚರಣೆ ನಡೆಯುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಈಗಾಗಲೇ ವಾಣಿಜ್ಯ ಹಡಗುಗಳಿಗೆ ಎಚ್ಚರಿಕೆ ನೀಡಿದೆ. ಕಾರ್ಯಾಚರಣೆ ಸಾಮರ್ಥ್ಯ ಮತ್ತು ಮಾಮೂಲಿನ ಅಂಶಗಳಿಗಿಂತ ವ್ಯತ್ಯಯವಾಗುವ ಅಂಶಗಳ ಬಗ್ಗೆ ಸೇರಿದಂತೆ ಇಡೀ ಕಾರ್ಯಾಚರಣೆಯ ಮೇಲೆ ನಿಗಾ ಇಡಲಾಗುವುದು. ಇದಕ್ಕಾಗಿ ಭಾರತೀಯ ನೌಕಾಪಡೆ ಮತ್ತು ವಾಯುಪಡೆಯ ಹಲವು ಸಂಪನ್ಮೂಲಗಳನ್ನು ಬಳಕೆ ಮಡಿಕೊಳ್ಳಲಾಗುತ್ತದೆ ಎಂದು ಹೇಳಿವೆ.

ಭಾರತೀಯ ವಾಯುಪಡೆ ಈ ಧೀರ್ಘ ವ್ಯಾಪ್ತಿಯ ಸಾಗರ ಕಣ್ಗಾವಲಿಗಾಗಿ ಪೊಸೀಡಾನ್ 8ಐ ಗಸ್ತು ವಿಮಾನವನ್ನೂ ಬಳಸಿಕೊಳ್ಳಲಿದೆ. ಪಾಕಿಸ್ತಾನ ಏಳರಿಂದ ಎಂಟು ಯುದ್ಧ ನೌಕೆಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳುತ್ತಿದೆ ಎಂದು ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News