ಮೆಹುಲ್ ಚೋಕ್ಸಿ ಒಳ್ಳೆಯ ವ್ಯಕ್ತಿ ಎಂದು ಭಾರತದ ಅಧಿಕಾರಿಗಳೇ ಹೇಳಿದ್ದರು: ಆ್ಯಂಟಿಗುವಾ ಪ್ರಧಾನಿ

Update: 2019-09-26 08:11 GMT

ನ್ಯೂಯಾರ್ಕ್, ಸೆ.26: ಬಹುಕೋಟಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ಆರೋಪಿಯಾಗಿರುವ ಹಾಗು ದೇಶ ಬಿಟ್ಟು ಪರಾರಿಯಾಗಿರುವ ವಜ್ರೋದ್ಯಮಿ ಮೆಹುಲ್ ಚೊಕ್ಸಿ ಒಬ್ಬ ವಂಚಕ ಹಾಗೂ ನಮ್ಮ ದೇಶಕ್ಕೆ ಆತನಿಂದ ಯಾವುದೇ ಪ್ರಯೋಜನವಿಲ್ಲ ಎಂದು ಆ್ಯಂಟಿಗುವಾ ಮತ್ತು ಬಾರ್ಬಡಾ ಪ್ರಧಾನಿ ಗಾಸ್ಟೊನ್ ಬ್ರೌನ್ ಹೇಳಿದ್ದಾರೆ.

ತಮ್ಮ ದೇಶದ ಪೌರತ್ವ ಹೊಂದಿರುವ ಆತನನ್ನು ಭಾರತಕ್ಕೆ ಗಡೀಪಾರುಗೊಳಿಸಲಾಗುವುದು. ಆತನಿಗೆ ಭಾರತೀಯ ಅಧಿಕಾರಿಗಳೇ ಈ ಹಿಂದೆ ಅನುಮತಿ ನೀಡಿದ್ದರು ಎಂದು ಅವರು ಹೇಳಿದರು.

“ಆತನ ಎಲ್ಲಾ ಅಪೀಲುಗಳು ತಿರಸ್ಕೃತಗೊಂಡ ನಂತರ ಆತನನ್ನು ಕೊನೆಗೆ ಗಡೀಪಾರು ಮಾಡಲಾಗುವುದೆಂದು ನಿಮಗೆ ಭರವಸೆ ನೀಡುತ್ತೇನೆ.  ಇದು ಕೇವಲ ಸಮಯದ ವಿಚಾರ'' ಎಂದು ಅವರು ಹೇಳಿದ್ದಾರೆ.

ಆತ ಒಳ್ಳೆಯ ವ್ಯಕ್ತಿ ಎಂದು ಆರಂಭದಲ್ಲಿ ಹೇಳಿದ್ದ ಭಾರತೀಯ ಅಧಿಕಾರಿಗಳು ನಂತರ ಆತನೊಬ್ಬ ವಂಚಕ ಎಂದು ತಿಳಿಸಿದ್ದರು ಎಂದು ಬ್ರೌನ್ ಹೇಳಿದರು.

“ಏನಿದ್ದರೂ ಭಾರತದಿಂದ ದೊರೆತ ಮಾಹಿತಿ ಆಧಾರದಲ್ಲಿ ನಮ್ಮ ಅಧಿಕಾರಿಗಳು ಆತನಿಗೆ ಇಲ್ಲಿಯ  ಪೌರತ್ವ ನೀಡಿದ್ದರು. ಇದರ ಜವಾಬ್ದಾರಿಯನ್ನು ಭಾರತೀಯ ಅಧಿಕಾರಿಗಳು ಹೊರಬೇಕು'' ಎಂದು ಹೇಳಿದ ಬ್ರೌನ್, “ಅವರು ಇಲ್ಲಿಗೆ ಬಂದು ಆತ ಒಪ್ಪಿದರೆ ಆತನ ಸಂದರ್ಶನ ನಡೆಸಬಹುದು. ಇದಕ್ಕೂ ನನ್ನ ಸರಕಾರಕ್ಕೂ ಸಂಬಂಧವಿಲ್ಲ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News