ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕಾಲಿಟ್ಟ ಪ್ರಪ್ರಥಮ ಅರಬ್ ಪ್ರಜೆ ಹಝ್ಝಾ ಅಲ್ ಮನ್ಸೂರಿ

Update: 2019-09-26 10:05 GMT

ಸಂಯುಕ್ತ ಅರಬ್ ಸಂಸ್ಥಾನದ ಪ್ರಜೆ 35 ವರ್ಷದ ಹಝ್ಝಾ ಅಲ್ ಮನ್ಸೂರಿ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕಾಲಿಟ್ಟ ಮೊದಲ ಅರಬ್ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮನ್ಸೂರಿ ರಷ್ಯಾದ ಒಲೆಗ್ ಸ್ಕ್ರಿಪೊಚ್ಕಾ ಹಾಗೂ ನಾಸಾ  ಗಗನಯಾತ್ರಿ ಜೆಸ್ಸಿಕಾ ಮೀರ್ ಅವರನ್ನೊಳಗೊಂಡ ರಷ್ಯಾ ಗಗನನೌಕೆ ಕಝಕಿಸ್ತಾನದಿಂದ ಹೊರಟು ಆರು ಗಂಟೆಗಳ ಪ್ರಯಾಣದ ಬಳಿಕ ಬಾಹ್ಯಾಕಾಶ ಕೇಂದ್ರವನ್ನು ಬುಧವಾರ ತಲುಪಿದೆ.

ಮೂವರೂ ಆರ್ಬಿಟಿಂಗ್ ಲ್ಯಾಬ್ ನ ಸಣ್ಣ ತೂತಿನಂತಹ ಪ್ರವೇಶದ್ವಾರದ ಮೂಲಕ ತೇಲುತ್ತಾ ಒಳ ಪ್ರವೇಶಿಸಿ ಅಲ್ಲಿ ಅವರ ಆರು ಮಂದಿ ಸಹೋದ್ಯೋಗಿಗಳ ಜತೆ ಸೇರಿ ಸಂಭ್ರಮಿಸಿದರು ಎಂದು ನಾಸಾ ಟ್ವೀಟ್ ಮಾಡಿದೆ ಹಾಗೂ ಈ ಕುರಿತಾದ ವೀಡಿಯೋ ಕೂಡ ಪೋಸ್ಟ್ ಮಾಡಿದೆ.

ಇದು ತಮ್ಮ ಡ್ರೀಮ್ ಮಿಷನ್ ಎಂದು ಮನ್ಸೂರಿ ಹೇಳಿಕೊಂಡಿದ್ದಾರೆ. ದುಬೈಯ ಮುಹಮ್ಮದ್ ಬಿನ್ ರಶೀದ್ ಸ್ಪೇಸ್ ಸೆಂಟರ್ ನಲ್ಲಿ ಈ ಗಗನನೌಕೆ ಉಡಾವಣೆಯನ್ನು ನೋಡಲು ಬಹಳಷ್ಟು ಮಂದಿ ಜಮಾಯಿಸಿದ್ದರಲ್ಲದೆ ಮನ್ಸೂರಿಯನ್ನು ನ್ಯಾಷನಲ್ ಹೀರೋ ಎಂದು ಜನ ಹೊಗಳಿದ್ದಾರೆ. ಈ ಸಂದರ್ಭ ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಝಗಮಗಿಸುವ ಬೆಳಕಿನಿಂದ ಕಂಗೊಳಿಸಿತ್ತು.

ಮನ್ಸೂರಿ ಎಂಟು ದಿನಗಳ ಕಾಲ ಬಾಹ್ಯಾಕಾಶ ಕೇಂದ್ರದಲ್ಲಿರಲಿದ್ದು ಅವರು ಅಕ್ಟೋಬರ್ 3ರಂದು ಇತರ ಇಬ್ಬರು ಗಗನಯಾತ್ರಿಗಳೊಂದಿಗೆ ವಾಪಸಾಗಲಿದ್ದು. ಮನ್ಸೂರಿ ಜತೆಗೆ ಹೋಗಿರುವ ಇಬ್ಬರು ಅಲ್ಲಿಯೇ ಮುಂದಿನ ವರ್ಷದ ತನಕ ಇರಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News