"ಅಪರಾಧಿಗಳನ್ನು ಶಿಕ್ಷಿಸಲಾಗದಿದ್ದರೆ ನನ್ನನ್ನೂ ಸಾಯಿಸಿ"

Update: 2019-09-28 06:12 GMT

ಲಕ್ನೋ: "ಅಪರಾಧಿಗಳನ್ನು ಜೈಲಿಗೆ ಕಳುಹಿಸಲಾಗದಿದ್ದರೆ ನನ್ನನ್ನೂ ಸಾಯಿಸಿ"- ಬುಲಂದರ್‌ಶಹರ್ ಗಲಭೆಯಲ್ಲಿ ಹತ್ಯೆಗೀಡಾದ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಅವರ ಪತ್ನಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಹೀಗೆ. ಹತ್ಯೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಜಾಮೀನು ದೊರಕಿರುವ ಬಗ್ಗೆ ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.

"ಆರೋಪಿಗಳಿಗೆ ಜಾಮೀನು ಸಿಕ್ಕಿದ್ದರಿಂದ ನಮಗೆ ತೀವ್ರ ಆಘಾತವಾಗಿದೆ. ಈ ಪ್ರಕರಣದಲ್ಲಿ ಜಾಮೀನು ಸಾಧ್ಯವೇ ಇಲ್ಲ. ನ್ಯಾಯವ್ಯವಸ್ಥೆ ಬಗ್ಗೆ ನನಗೆ ಹತಾಶೆಯಾಗಿದೆ. ಇದು ತಪ್ಪು. ಸರ್ಕಾರ ಈ ಬಗ್ಗೆ ಮೇಲ್ಮನವಿ ಸಲ್ಲಿಸಬೇಕು. ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಸಾಧ್ಯವಾಗದಿದ್ದರೆ ನನ್ನನ್ನು ಕೊಲ್ಲಿ ಅಥವಾ ನನ್ನನ್ನು ಕೊಲ್ಲಿಸಿ. ಬಳಿಕ ಸರ್ಕಾರವನ್ನು ಪ್ರಶ್ನಿಸುವವರು ಯಾರೂ ಇರುವುದಿಲ್ಲ. ಸರ್ಕಾರ ಯಾರಿಗೂ ಉತ್ತರ ನೀಡಬೇಕಾಗುವುದಿಲ್ಲ" ಎಂದು ಅವರು ಕಿಡಿಕಾರಿದರು.

"ಇದು ನಮಗೆ ಅತ್ಯಂತ ಕೆಟ್ಟ ಸುದ್ದಿ" ಎಂದು ಅವರ ಪುತ್ರ ಶ್ರೇಯ ಪ್ರತಾಪ್ ಸಿಂಗ್ ಪ್ರತಿಕ್ರಿಯಿಸಿದರು. "ಹತ್ಯೆ ಘಟನೆಗೆ ಯೋಗೇಶ್‌ ರಾಜ್ ಪ್ರಮುಖ ಕಾರಣ. ಮತ್ತೆ ಆತ ಇಂಥ ಕೃತ್ಯದಲ್ಲಿ ತೊಡಗುವುದಿಲ್ಲ ಎಂಬ ಖಾತ್ರಿ ಏನು ? ಹತ್ಯೆ ನಡೆಸಿದ ಎಂಟು ತಿಂಗಳಲ್ಲೇ ಜಾಮೀನು ಸಿಕ್ಕಿದೆ" ಎಂದು ಅವರು ಹೇಳಿದರು.

ಬಜರಂಗದಳ ಮುಖಂಡ ಯೋಗೇಶ್‌ ರಾಜ್ ಹಾಗೂ ಇತರ ಮೂವರಿಗೆ ಅಲಹಾಬಾದ್ ಹೈಕೋರ್ಟ್ ನಿನ್ನೆ ಜಾಮೀನು ನೀಡಿತ್ತು. 2018ರ ಡಿಸೆಂಬರ್‌ನಲ್ಲಿ ನಡೆದ ಬುಲಂದರ್‌ಶಹರ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರ 44 ಮಂದಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ ಮೂರೇ ತಿಂಗಳಲ್ಲಿ ಪ್ರಮುಖ ಆರೋಪಿಗಳು ಜಾಮೀನು ಪಡೆದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News