'500 ಸೌದಿ ಸೈನಿಕರನ್ನು ಕೊಂದಿದ್ದೇವೆ': ವಿಡಿಯೋ ಬಿಡುಗಡೆಗೊಳಿಸಿದ ಹೌದಿ ಬಂಡುಕೋರರು

Update: 2019-09-30 09:51 GMT

ಕೈರೋ, ಸೆ.30: ಸೌದಿ ಅರೇಬಿಯಾ ನೇತೃತ್ವದ ಮೈತ್ರಿ ಪಡೆಯ ಮೇಲೆ ತಾವು ಇರಾನ್ ಹಾಗೂ ಸೌದಿ ಅರೇಬಿಯಾ  ಗಡಿಯ ಸಮೀಪ ದೊಡ್ಡ ದಾಳಿ ನಡೆಸಿರುವುದಾಗಿ ಹೇಳಿಕೊಂಡಿರುವ ಯೆಮನ್ ನ ಹೌದಿ ಬಂಡುಕೋರರು, ಈ ದಾಳಿಯಲ್ಲಿ ಮೈತ್ರಿ ಪಡೆಯ 500 ಮಂದಿ ಸೈನಿಕರನ್ನು ಕೊಂದಿರುವುದಾಗಿ ಅಥವಾ ಗಾಯಗೊಳಿಸಿರುವುದಾಗಿ ಹೇಳಿಕೊಂಡಿದ್ದಾರೆ.

ತಮ್ಮ ಹೇಳಿಕೆ ಸಮರ್ಥಿಸಿಕೊಳ್ಳಲು ಬಂಡುಕೋರರು ವೀಡಿಯೋ ಕೂಡ ಬಿಡುಗಡೆಗೊಳಿಸಿದ್ದು, ಈ ವೀಡಿಯೋಗಳು  ಸೌದಿ ಅಧಿಕಾರಿಗಳ ಸಹಿತ ನೂರಾರು ಮಂದಿ ಸೈನಿಕರನ್ನು ಬಂಧಿಯಾಗಿರಿಸಿರುವುದನ್ನು ತೋರಿಸುತ್ತವೆ ಎಂದು ಅವರು ಹೇಳಿಕೊಂಡಿದ್ದಾರೆ.

ಯೆಮನ್ ಬಂಡುಕೋರರ ಹೇಳಿಕೆಗಳಿಗೆ ಸೌದಿ ನೇತೃತ್ವದ ಮಿತ್ರ ಪಡೆ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ. ಆದರೆ ಈ ವಿಷಯ ದೃಢಪಟ್ಟಿದ್ದೇ ಆದಲ್ಲಿ ಇರಾನ್ ಜತೆಗಿರುವ ಈ ಬಂಡುಕೋರರಿಗೆ ದೊಡ್ಡ ವಿಜಯ ದೊರೆತಂತಾಗುವುದು.

ಹೌದಿ ಒಡೆತನದ ಅಲ್-ಮಸಿರಾಹ್ ಟಿವಿಯಲ್ಲಿ ರವಿವಾರ ತೋರಿಸಲಾದ ವಿಡಿಯೋ ದೃಶ್ಯಾವಳಿಯಲ್ಲಿ ಉದ್ದ ಸರತಿ ಸಾಲಿನಲ್ಲಿ ನಿಂತ ಸೈನಿಕರು ಕಾಣಿಸುತ್ತಿದ್ದು, ಬಂಧಿತ ಸೈನಿಕರು ದುರ್ಗಮ ಹಾದಿಯಲ್ಲಿ ನಡೆಯುತ್ತಿರುವ ದೃಶ್ಯಗಳಿವು ಎಂದು ಹೇಳಲಾಗಿದೆ. ಬಂಡುಕೋರರಿಗೆ ಶರಣಾಗಿರುವ ಹೆಚ್ಚಿನ ಪುರುಷರು ಯೆಮನ್ ಹಾಗೂ ಸೌದಿ ಅರೇಬಿಯಾದ ಕೆಲ ಭಾಗಗಳಲ್ಲಿ ಪುರುಷರು ಧರಿಸುವಂತಹ ಫ್ಲಿಪ್ ಪ್ಲಾಪ್ ಹಾಗೂ ಸಾಂಪ್ರದಾಯಿಕ ಸಾರೊಂಗ್ ರೀತಿಯ ಉಡುಗೆ ಧರಿಸಿದ್ದರು. ಅವರಲ್ಲಿ ಕನಿಷ್ಠ ಇಬ್ಬರು ತಾವು ಸೌದಿ ನಾಗರಿಕರೆಂದು ಕ್ಯಾಮರಾದೆದುರು ಹೇಳಿಕೊಂಡಿದ್ದಾರೆ.

ಇನ್ನು ಕೆಲ ದೃಶ್ಯಗಳಲ್ಲಿ ಸೌದಿ ಚಿಹ್ನೆಗಳಿರುವ ವಾಹನಗಳು ಹೊತ್ತಿ ಉರಿಯುತ್ತಿರುವುದು ಕಾಣಿಸುತ್ತವೆ. ದಾಳಿಯದ್ದೆಂದು ಹೇಳಲಾದ ವೀಡಿಯೋ ಕೂಡ ತೋರಿಸಲಾಗಿದ್ದು  ನಂತರ ಸೌದಿ ಸಮವಸ್ತ್ರ ಧರಿಸಿದವರು ಹೆಣವಾಗಿ ಬಿದ್ದಿರುವುದೂ ಕಾಣಿಸುತ್ತದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News