ಭಾರೀ ಮಳೆಗೆ ಜೈಲು ಜಲಾವೃತ: 900 ಕೈದಿಗಳ ಸ್ಥಳಾಂತರ

Update: 2019-09-30 15:54 GMT

ಲಕ್ನೋ, ಸೆ.30: ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಈಗಾಗಲೇ ನೂರಹತ್ತಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಮಧ್ಯೆ ಉತ್ತರ ಪ್ರದೇಶದ ಜೈಲಿನೊಳಗೆ ಮಳೆನೀರು ಪ್ರವೇಶಿಸಿದ ಕಾರಣ ಅಲ್ಲಿದ್ದ 900 ಖೈದಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಇನ್ನೊಂದೆಡೆ, ಬಿಹಾರದ ಸರಕಾರಿ ಆಸ್ಪತ್ರೆಯೊಳಗೆ ಮಳೆನೀರು ನಿಂತ ಪರಿಣಾಮ ರೋಗಿಗಳು ಪರದಾಡುವಂತಾದರೆ ವೈದ್ಯರು ಮತ್ತು ಇತರ ಸಿಬ್ಬಂದಿ ಮೊಣಕಾಲುವರೆಗಿನ ನೀರಿನಲ್ಲೇ ತಮ್ಮ ಕೆಲಸವನ್ನು ಮುಂದುವರಿಸಿದರು.

ಪೂರ್ವ ಉತ್ತರ ಪ್ರದೇಶ ಮತ್ತು ಬಿಹಾರ ನಡುವಿನ ಕನಿಷ್ಟ ಏಳು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಮತ್ತು ಆರು ರೈಲುಗಳ ದಿಕ್ಕು ಬದಲಾಯಿಸಲಾಗಿದೆ. ಎರಡೂ ರಾಜ್ಯಗಳ ಗ್ರಾಮೀಣ ಭಾಗದಲ್ಲಿ ಸಾವಿರಾರು ಮನೆಗಳು ಧರಾಶಾಯಿಯಾಗಿದ್ದರೆ ಎಕರೆಗಟ್ಟಲೆ ಜಮೀನು ನೀರಿನಲ್ಲಿ ಮುಳುಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬಿಹಾರಕ್ಕೆ ತಾಗಿಕೊಂಡಿರುವ ಪೂರ್ವ ಉತ್ತರ ಪ್ರದೇಶದ ಜಿಲ್ಲೆಗಳಾದ ಬಲಿಯಾ, ವಾರಣಾಸಿ ಮತ್ತು ಜುವನ್ಪುರಗಳು ಮಳೆಯಿಂದಾಗಿ ಅತೀಹೆಚ್ಚು ಬಾಧಿತ ಪ್ರದೇಶಗಳಾಗಿವೆ. ಬಿಹಾರದ ರಾಜಧಾನಿ ಪಟ್ನಾದ ಬಹುತೇಕ ವಸತಿ ಪ್ರದೇಶಗಳು ಜಲಾವೃತಗೊಂಡು ಜನಜೀವನ ಸ್ತಬ್ಧಗೊಂಡಿತು.

ಪಟ್ನಾದಲ್ಲಿ ನೂರು ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಎರಡನೇ ಅತೀದೊಡ್ಡ ಸರಕಾರ ಆಸ್ಪತ್ರೆ ನಲಂದಾ ವೈದ್ಯಕೀಯ ಕಾಲೇಜು ಆಸ್ಪತ್ರೆಯೊಳಗೆ ನೀರು ಹೊಕ್ಕ ಪರಿಣಾಮ ರೋಗಿಗಳು ಪರದಾಡುವಂತಾಯಿತು. ಪಟ್ನಾದಲ್ಲಿ ನೆರೆಯಲ್ಲಿ ಸಿಲುಕಿರುವವರ ರಕ್ಷಣೆಗೆ 30 ಬೋಟ್‌ಗಳು ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯ 19 ತಂಡಗಳನ್ನು ನಿಯೋಜಿಸಲಾಗಿದೆ. ಪಟ್ನಾದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾರತೀಯ ವಾಯು ಪಡೆಯ ವಿಮಾನದಲ್ಲಿ ನೆರೆಪೀಡಿತ ಪ್ರದೇಶಗಳ ವೈಮಾನಿಕ ಪರಿಶೀಲನೆ ನಡೆಸಿದ್ದಾರೆ.

ನೆರೆಯಿಂದಾಗಿ ತಮ್ಮ ಮನೆಯೊಳಗೆ ಸಿಲುಕಿಕೊಂಡಿದ್ದ ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಮತ್ತು ಅವರ ಕುಟುಂಬವನ್ನು ರಕ್ಷಿಸಲಾಗಿದ್ದು ಬೋಟ್ ಮೂಲಕ ಸುರಕ್ಷಿತ ಪ್ರದೇಶಕ್ಕೆ ಸಾಗಿಸಲಾಗಿದೆ ಎಂದು ವರದಿ ತಿಳಿಸಿದೆ.

ಪೂರ್ವ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಗಂಗಾ ನದಿ ಸಮೀಪವಿರುವ ಜೈಲಿನೊಳಗೆ ನೆರೆನೀರು ಪ್ರವೇಶಿಸಿದ ಕಾರಣ ಅದರೊಳಗಿದ್ದ 863 ಖೈದಿಗಳನ್ನು ಆಝಮ್‌ಗಡ್ ಮತ್ತು ಅಂಬೇಡ್ಕರ್ ನಗರ್ ಜೈಲಿಗೆ ಸ್ಥಳಾಂತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News