ಅಯೋಧ್ಯೆ ವಿವಾದ ಸಂಧಾನ ಪ್ರಕ್ರಿಯೆಗೆ ಸೇರುವುದಿಲ್ಲ: ರಾಮಲಲ್ಲಾ ವಕೀಲರ ಹೇಳಿಕೆ

Update: 2019-09-30 17:46 GMT

ಹೊಸದಿಲ್ಲಿ, ಸೆ.30: ಅಯೋಧ್ಯೆ ವಿವಾದ ಪರಿಹಾರಕ್ಕೆ ಪರ್ಯಾಯ ಮಾರ್ಗವಾಗಿ ಸಂಧಾನ ಪ್ರಕ್ರಿಯೆಯನ್ನು ಮತ್ತೆ ಆರಂಭಿಸಿದರೆ ತಾವು ಅದರಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ರಾಮಲಲ್ಲಾ ವಿರಾಜ್‌ಮಾನ್‌ನ ವಕೀಲರು ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ.

 ಅಯೋಧ್ಯೆ ವಿವಾದಕ್ಕೆ ಪರಿಹಾರ ರೂಪಿಸಲು ಮತ್ತೆ ಸಂಧಾನ ಪ್ರಕ್ರಿಯೆ ಆರಂಭಿಸಬೇಕು ಎಂಬ ಮನವಿಯನ್ನು ಸುಪ್ರೀಂಕೋರ್ಟ್ ನ್ಯಾಯಪೀಠ ಪುರಸ್ಕರಿಸಿದೆ. ಆದರೆ ಅಯೋಧ್ಯೆ ವಿಚಾರಣೆಗೆ ವಿಧಿಸಿರುವ ಅಕ್ಟೋಬರ್ 18ರ ಗಡುವನ್ನು ನೆನಪಿಸಿಕೊಂಡು ನ್ಯಾಯಪೀಠದ ವಿಚಾರಣೆಯ ಜೊತೆಗೆಯೇ ಸಂಧಾನ ಪ್ರಕ್ರಿಯೆ ನಡೆಯಬೇಕು ಎಂದು ಸ್ಪಷ್ಟಪಡಿಸಿದೆ.

 ಕಳೆದ ತಿಂಗಳು ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಿದ್ದ ರಾಮಲಲ್ಲ ವಿರಾಜ್‌ಮಾನ್ ಪರ ವಕೀಲ ಸಿಎಸ್ ವೈದ್ಯನಾಥನ್, ಜನ್ಮಸ್ಥಾನ ಎಂಬುದೇ ದೈವತ್ವದ ಸಂಕೇತವಾಗಿರುವುದರಿಂದ ರಾಮ ಜನ್ಮಭೂಮಿಗೆ ಜಂಟಿ ವಾರಿಸುದಾರರು ಇರಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಸೋಮವಾರ ಸುಪ್ರೀಂಕೋರ್ಟ್‌ನ ನ್ಯಾಯಪೀಠದ ಎದುರು ಹೇಳಿಕೆ ನೀಡಿದ ವೈದ್ಯನಾಥನ್ , ಸಂಧಾನ ಮಾತುಕತೆ ಪುನರಾರಂಭಿಸುವ ಬಗ್ಗೆ ವರದಿ ಕೇಳಿಬರುತ್ತಿದೆ. ಆದರೆ ರಾಮಲಲ್ಲ ಕಡೆಯಿಂದ ಈ ಪ್ರಕ್ರಿಯೆಯಲ್ಲಿ ಯಾರೊಬ್ಬರೂ ಪಾಲ್ಗೊಳ್ಳುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News