ಮೆಕಲ್ ಹೋಲ್ಡಿಂಗ್‌ಗೆ ಕರಾಚಿಯಲ್ಲಿ ಔತಣಕೂಟ ಏರ್ಪಡಿಸಿದ ಅಫ್ರಿದಿ

Update: 2019-09-30 17:53 GMT

ಕರಾಚಿ, ಸೆ.30: ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕತೆ ಮೈಕಲ್ ಹೋಲ್ಡಿಂಗ್‌ಗೆ ಕರಾಚಿಯಲ್ಲಿರುವ ತನ್ನ ನಿವಾಸದಲ್ಲಿ ಔತಣ ಕೂಟ ಏರ್ಪಡಿಸಿದರು.

ರವಿವಾರ ತಡರಾತ್ರಿ ತನ್ನ ಮನೆಯಲ್ಲಿ ಹೋಲ್ಡಿಂಗ್‌ಗೆ ಆಯೋಜಿಸಿದ್ದ ಡಿನ್ನರ್‌ನ ಫೋಟೊಗಳನ್ನು ಅಫ್ರಿದಿ ಟ್ವೀಟ್ ಮಾಡಿದ್ದಾರೆ. ಇವರಿಬ್ಬರ ಔತಣ ಕೂಟಕ್ಕೆ ಪಾಕ್‌ನ ಇನ್ನೋರ್ವ ಮಾಜಿ ನಾಯಕ ಸಯೀದ್ ಅನ್ವರ್ ಸಾಥ್ ನೀಡಿದರು.

‘‘ಮನೆಯಲ್ಲಿ ದಂತಕತೆ ಮೈಕಲ್ ಹೋಲ್ಡಿಂಗ್‌ಗೆ ಡಿನ್ನರ್ ಏರ್ಪಡಿಸಿರುವುದು ನಿಜಕ್ಕೂ ಒಂದು ಗೌರವ. ಮೈಕಲ್ ಕರಾಚಿ ಭೇಟಿಯನ್ನು ಆಯೋಜಿಸಿದ್ದ ಡಾ.ಕಾಸಿಫ್‌ಗೆ ಕೃತಜ್ಞತೆ ಸಲ್ಲಿಸುವೆ. ನನ್ನೊಂದಿಗೆ ಭಾಗಿಯಾಗಿರುವ ಸಯೀದ್ ಅನ್ವರ್‌ಗೆ ಧನ್ಯವಾದ ಹೇಳುವೆ’’ಎಂದು ಅಫ್ರಿದಿ ಟ್ವೀಟ್ ಮಾಡಿದ್ದಾರೆ. ಹೋಲ್ಡಿಂಗ್ ಪಾಕಿಸ್ತಾನಕ್ಕೆ ವೈಯಕ್ತಿಕ ಭೇಟಿ ನೀಡಿದ್ದಾರೆ.ಸದ್ಯ, ಸರ್ಫರಾಝ್ ಅಹ್ಮದ್ ನೇತೃತ್ವದ ಪಾಕ್ ತಂಡ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯವನ್ನು ಆಡುತ್ತಿದೆ.

‘‘ನನಗೆ ಭದ್ರತೆಯ ಭಯವಿದ್ದಿದ್ದರೆ ನಾನು ಪಾಕಿಸ್ತಾನಕ್ಕೆ ಬರುತ್ತಿರಲಿಲ್ಲ. ಇಲ್ಲಿ ನನಗೆ ಏನೂ ಸಮಸ್ಯೆಯಾಗಿಲ್ಲ. ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಲು ಶ್ರೀಲಂಕಾ ತಂಡಕ್ಕೆ ಪಾಕಿಸ್ತಾನಕ್ಕೆ ಬಂದಿರುವುದು ಉತ್ತಮ ಹಾಗೂ ಪ್ರೋತ್ಸಾಹದಾಯಕ ಸುದ್ದಿ’’ ಎಂದು ಸ್ಥಳೀಯ ಮಾಧ್ಯಮಕ್ಕೆ ಹೋಲ್ಡಿಂಗ್ ತಿಳಿಸಿದರು. ಮಾಜಿ ವಿಶ್ವಕಪ್ ವಿಜೇತ ಆಟಗಾರ ಹೋಲ್ಡಿಂಗ್ ಅಕ್ಟೋಬರ್ 2ರಂದು ಕರಾಚಿಯ ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಾಕಿಸ್ತಾನ-ಶ್ರೀಲಂಕಾ ನಡುವಿನ 3ನೇ ಏಕದಿನ ಪಂದ್ಯವನ್ನು ವೀಕ್ಷಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News