ಜಾವೇದ್ ಮಿಯಾಂದಾದ್ ದಾಖಲೆ ಪುಡಿಗಟ್ಟಿದ ಪಾಕ್‌ನ ಬಾಬರ್ ಆಝಂ

Update: 2019-09-30 17:55 GMT

ಕರಾಚಿ, ಸೆ.30: ಬಾಬರ್ ಆಝಂ 2019ರ ಕ್ಯಾಲೆಂಡರ್ ವರ್ಷದಲ್ಲಿ 1,000 ರನ್ ಪೂರೈಸಿದ ಪಾಕಿಸ್ತಾನದ ಮೊದಲ ಆಟಗಾರನೆಂಬ ಕೀರ್ತಿಗೆ ಭಾಜನರಾಗಿದ್ದಾರೆ. ಶ್ರೀಲಂಕಾ ವಿರುದ್ಧ ಸೋಮವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 11ನೇ ಏಕದಿನ ಶತಕ ಪೂರೈಸಿದ ಆಝಂ ಮಾಜಿ ನಾಯಕ ಜಾವೇದ್ ಮಿಯಾಂದಾದ್‌ರ ದಾಖಲೆಯೊಂದನ್ನು ಮುರಿದರು. ಕ್ಯಾಲೆಂಡರ್ ವರ್ಷದಲ್ಲಿ ವೇಗವಾಗಿ 1,000 ರನ್ ಪೂರೈಸಿದ ಮೊದಲ ಪಾಕ್ ಬ್ಯಾಟ್ಸ್‌ಮನ್ ಎನಿಸಿಕೊಂಡರು.

1987ರಲ್ಲಿ ಮಿಯಾಂದಾದ್ 21 ಇನಿಂಗ್ಸ್ ಗಳಲ್ಲಿ ಸಾವಿರ ರನ್ ಪೂರೈಸಿದ್ದರು. ಆಝಂ ಕೇವಲ 19 ಇನಿಂಗ್ಸ್‌ನಲ್ಲಿ ಈ ಮೈಲುಗಲ್ಲು ತಲುಪಿದ್ದಾರೆ. ತಲಾ 23 ಇನಿಂಗ್ಸ್ ಗಳಲ್ಲಿ ಸಾವಿರ ರನ್ ಪೂರೈಸಿರುವ ಮಾಜಿ ಮಧ್ಯಮ ಸರದಿ ಬ್ಯಾಟ್ಸ್‌ಮನ್ ಮುಹಮ್ಮದ್ ಯೂಸುಫ್ ಹಾಗೂ ಮಾಜಿ ಬ್ಯಾಟ್ಸ್‌ಮನ್ ಹಾಗೂ ಹಾಲಿ ಕೋಚ್ ಮಿಸ್ಬಾವುಲ್ ಹಕ್ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.

ಆಝಂರಲ್ಲದೆ 2019ರಲ್ಲಿ 1,000ಕ್ಕೂ ಅಧಿಕ ರನ್ ಗಳಿಸಿದ ಇತರ ಕ್ರಿಕೆಟಿಗರೆಂದರೆ: ವಿರಾಟ್ ಕೊಹ್ಲಿ(1,288 ರನ್), ರೋಹಿತ್ ಶರ್ಮಾ(1,232), ಆ್ಯರೊನ್ ಫಿಂಚ್(1,141) ಹಾಗೂ ಉಸ್ಮಾನ್ ಖ್ವಾಜಾ(1,085). ಸೋಮವಾರ ನಡೆದ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಜಯಿಸಿದ ಪಾಕ್ ನಾಯಕ ಸರ್ಫರಾಝ್ ಅಹ್ಮದ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಕರಾಚಿ ನಗರ 2009ರ ಬಳಿಕ ಸತತ ಎರಡು ಪಂದ್ಯಗಳ ಆತಿಥ್ಯವಹಿಸಿದೆ. ಮೊದಲ ಪಂದ್ಯ ಮಳೆಗಾಹುತಿಯಾಗಿತ್ತು. ಮೂರನೇ ಹಾಗೂ ಕೊನೆಯ ಪಂದ್ಯ ಬುಧವಾರ ಕರಾಚಿಯಲ್ಲಿ ನಡೆಯಲಿದೆ. ಉಭಯ ತಂಡಗಳು ಮುಂದಿನ ತಿಂಗಳು ಲಾಹೋರ್‌ನಲ್ಲಿ 3 ಪಂದ್ಯಗಳ ಟಿ-20 ಸರಣಿಯನ್ನಾಡಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News