ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಬಳಕೆ ನಿಷೇಧ

Update: 2019-10-02 14:21 GMT

ಬೆಂಗಳೂರು, ಅ.2: ಮಹಾತ್ಮ ಗಾಂಧೀಜಿಯ 150ನೇ ಜನ್ಮದಿನಾಚರಣೆ ಅಂಗವಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಸಾರ್ಟಿಸಿ) ಬಸ್ಸಿನಲ್ಲಿ ಪ್ರಯಾಣಿಕರಿಗೆ ನೀಡುತ್ತಿದ್ದ ಪ್ಲಾಸ್ಟಿಕ್ ನೀರಿನ ಬಾಟಲ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ನಗರದಲ್ಲಿಂದು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಮಹಾತ್ಮಗಾಂಧೀಜಿಯ 150 ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ‘ಸ್ವಚ್ಛತೆಯೇ ಸೇವೆ’ ಅಭಿಯಾನದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ನಿಲ್ದಾಣಗಳಲ್ಲಿ ಬಳಸಿ ಬಿಸಾಡಿದ ಪ್ಲಾಸ್ಟಿಕ್ ಬಾಟಲ್‌ಗಳನ್ನು ಸಂಗ್ರಹಿಸಿ ಜಾಗೃತಿ ಮೂಡಿಸಿ, ಪ್ಲಾಸ್ಟಿಕ್ ನೀರಿನ ಬಾಟಲ್ ಬಳಕೆಗೆ ಕಡಿವಾಣ ಹಾಕುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಿಗಮದಲ್ಲಿರುವ ಒಟ್ಟು 8800 ಬಸ್ಸುಗಳಲ್ಲಿ, 300 ಪ್ರತಿಷ್ಠಿತ ಸೇವೆಯ ಬಸ್ಸುಗಳಲ್ಲಿ ಕುಡಿಯುವ ನೀರಿನ ಬಾಟಲ್‌ಗಳನ್ನು ವಿತರಿಸಲಾಗುತ್ತಿದೆ. ಇತರೆ ಮೂರು ನಿಗಮಗಳು ಸೇರಿ ಸುಮಾರು 450 ಬಸ್ಸುಗಳಲ್ಲಿ ಪ್ರತಿವರ್ಷ ನಿಗಮವು 1.20 ಕೋಟಿ ಬಾಟಲ್‌ಗಳನ್ನು ಪ್ರಯಾಣಿಕರಿಗೆ ನೀಡಲಾಗುತ್ತಿದೆ. ಇಷ್ಟು ಅಗಾಧ ಸಂಖ್ಯೆಯ ಬಾಟಲ್‌ಗಳು ಭೂಮಿಯ ಒಡಲು ಸೇರುತ್ತಿದೆ. ಹೀಗಾಗಿ, ಅವುಗಳನ್ನು ರದ್ದು ಮಾಡಲಾಗುತ್ತಿದೆ ಎಂದರು.

ಕೆಎಸ್ಸಾರ್ಟಿಸಿಯು ಪ್ಲಾಸ್ಟಿಕ್ ಬಾಟಲ್‌ಗಳನ್ನು ರದ್ದುಗೊಳಿಸಿ, ಪರಿಸರ ಕಾಳಜಿಗೆ ಮುಂದಾಗಿದೆ. ಪ್ರಯಾಣಿಕರು ಕುಡಿಯುವ ನೀರಿನ ಬಾಟಲಿಗಳನ್ನು ಸ್ವತಃ ತಾವೇ ತರುವಂತೆ ಆದೇಶ ಹೊರಡಿಸಲಾಗಿದೆ. ಈ ಸಂಬಂಧ ಆನ್‌ಲೈನ್ ಟಿಕೆಟ್‌ನಲ್ಲಿ ಮುದ್ರಿಸುವುದಲ್ಲದೇ ಕೆಎಸ್ಸಾರ್ಟಿಸಿಯ ಜಾಲತಾಣಗಳ ಸೇರಿದಂತೆ ಎಲ್ಲೆಡೆ ಪ್ರಕಟಿಸಿ ಜಾಗೃತಿ ಮೂಡಿಸಲಾಗುತ್ತದೆ ಎಂದು ವಿವರಿಸಿದರು.

ಸೆಲ್ಫಿ ವಿತ್ ಮೈ ಓನ್ ಬಾಟಲ್ ಸ್ಪರ್ಧೆ: ಕೆಎಸ್ಸಾರ್ಟಿಸಿ ವತಿಯಿಂದ ತಮ್ಮ ಬಾಟಲ್‌ಗಳನ್ನು ತಾವೇ ತರುವಂತೆ ಪ್ರೋತ್ಸಾಹಿಸುವ, ಜಾಗೃತಿ ಮೂಡಿಸುವ ಉದ್ದೇಶದಿಂದ ಸೆಲ್ಫಿ ವಿತ್ ಮೈ ಓನ್ ಬಾಟಲ್ ಎಂಬ ಸ್ಪರ್ಧೆ ಆಯೋಜಿಸಿದೆ. ಪ್ರಯಾಣಿಕರು ಪ್ರೀಮಿಯಮ್ ಬಸ್‌ಗಳಲ್ಲಿ ಪ್ರಯಾಣಿಸುವ ವೇಳೆ ಬಾಟಲ್‌ನೊಂದಿಗೆ ಸೆಲ್ಫಿ ತೆಗೆದು ಪೋಸ್ಟ್ ಮಾಡಬೇಕು. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಒಂದು ಕೆಎಸ್ಸಾರ್ಟಿಸಿಯ ಪ್ರೀಮಿಯಮ್ ಬಸ್ಸಿನಲ್ಲಿ ಒಂದು ಮಾರ್ಗದಲ್ಲಿ ಉಚಿತ ಪ್ರಯಾಣ ಸೌಲಭ್ಯ ನೀಡಲಾಗುತ್ತದೆ. ಸ್ವಚ್ಛತೆ ಕಾಪಾಡುವ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಸಾರಿಗೆ ಸ್ವಚ್ಛತಾ ಪ್ರಶಸ್ತಿ ಮತ್ತು ಸಾರಿಗೆ ಪರಿಸರ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.

ಪ್ರೀಮಿಯಮ್ ಬಸ್ಸಿನಲ್ಲಿ ಕಸದ ಚೀಲವನ್ನು ಇಡುವ ವ್ಯವಸ್ಥೆ, ನಿಲ್ದಾಣಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಸ್ಯಾನಿಟರಿ ಕುರಿತ ಮಿಷನ್‌ನ್ನು ಅಳವಡಿಸಿ ಸ್ವಚ್ಛತೆಗೆ ಆದ್ಯತೆ ನೀಡಲು ಮುಂದಾಗಿದೆ. ಅಲ್ಲದೆ, ನಿಗಮದಲ್ಲಿ ಧೂಮಪಾನ ಹಾಗೂ ಬಯಲು ಮೂತ್ರ ವಿಸರ್ಜನೆಯನ್ನು ನಿಷೇಧ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ನಿಗಮದ ಕವಿತಾ ಎಸ್ ಮನ್ನಿಕೇರಿ, ಉರ್ಮಿಳಾ ಕಳಸದ, ಇಂಡಿಯಾ ಪ್ಲಾಗ್ ರನ್‌ನ ಶೋಭಾ ರಾಂದೆರ್ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News