ಸಂಚಾರ ನಿಯಮ ಉಲ್ಲಂಘನೆ: ಒಂದೇ ದಿನದಲ್ಲಿ 16 ಸಾವಿರ ಪ್ರಕರಣ ದಾಖಲು

Update: 2019-10-02 15:23 GMT

ಬೆಂಗಳೂರು, ಅ.2: ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಲಾಗಿದ್ದ ಭಾರೀ ಮೊತ್ತದ ದಂಡವನ್ನು ತಗ್ಗಿಸಿದರೂ, ವಾಹನ ಸವಾರರ ನಿಯಮ ಉಲ್ಲಂಘನೆ ಪ್ರಕರಣಗಳು ಮಾತ್ರ ತಗ್ಗಿಲ್ಲ. ಅಲ್ಲದೆ, ಕೇವಲ ಒಂದೇ ದಿನದಲ್ಲೇ ಬರೋಬ್ಬರಿ 16 ಸಾವಿರ ಪ್ರಕರಣಗಳನ್ನು ಸಂಚಾರಿ ಪೊಲೀಸರು ಪತ್ತೆಹಚ್ಚಿದ್ದಾರೆ.

ಅ.1ರಂದು ಸಂಚಾರಿ ಪೊಲೀಸರು ನಗರದಾದ್ಯಂತ ಸುಮಾರು 16 ಸಾವಿರ ಪ್ರಕರಣ ದಾಖಲಿಸಿ 21.81 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿದ 36 ಮಂದಿ ಸಿಕ್ಕಿಬಿದ್ದಿದ್ದು, ಅವರಿಗೆ ನ್ಯಾಯಾಲಯದಲ್ಲಿ ದಂಡ ಕಟ್ಟಲು ಪೊಲೀಸರು ನೋಟಿಸ್‌ನಲ್ಲಿ ಸೂಚಿಸಿದ್ದಾರೆ.

ಅಪರಾಧ ಪ್ರಕರಣಗಳಲ್ಲಿ ಪ್ರಮುಖವಾಗಿ ಹೆಲ್ಮೆಟ್ ರಹಿತ ವಾಹನ ಚಾಲನೆಯೇ ಹೆಚ್ಚಾಗಿವೆ. 3557 ಮಂದಿ ಹೆಲ್ಮೆಟ್ ರಹಿತ ಸವಾರರಿಗೆ 3,56,600ರೂ. ದಂಡ ವಿಧಿಸಿದ್ದು, ಹೆಲ್ಮೆಟ್ ಇಲ್ಲದ 3496 ಹಿಂಬದಿ ಸವಾರರಿಗೆ 3,50,500ರೂ. ದಂಡ ಹಾಕಲಾಗಿದೆ. ಅದೇ ರೀತಿ, ಅತಿವೇಗದ ಚಾಲನೆಗಾಗಿ 184 ಮಂದಿಗೆ 1,70,300ರೂ. ದಂಡ ವಿಧಿಸಲಾಗಿದೆ.

ಸಿಗ್ನಲ್ ಜಂಪ್ ಮಾಡಿದ 1,668 ಮಂದಿಗೆ 1,66,800ರೂ., ಸಮವಸ್ತ್ರ ಧರಿಸದ 945 ಚಾಲಕರಿಗೆ 94,500ರೂ., ಸಂಖ್ಯಾಫಲಕ ಇಲ್ಲದ 802 ವಾಹನಗಳಿಗೆ 80,200 ರೂ., ನಿಷೇಧಿತ ರಸ್ತೆಯಲ್ಲಿ ಚಾಲನೆಗಾಗಿ 770 ವಾಹನಗಳಿಗೆ 77,700ರೂ., ಪಥಸಂಚಲನದ ಶಿಸ್ತು ಉಲ್ಲಂಘನೆಗಾಗಿ 516 ಮಂದಿಗೆ 51,600ರೂ.,

ಪರವಾನಗಿ ಇಲ್ಲದೆ ವಾಹನ ಚಾಲನೆ ಮಾಡಿದ 142 ಮಂದಿಗೆ 42,600ರೂ., ಸೀಟ್‌ಬೆಲ್ಟ್ ಧರಿಸದ 342 ಮಂದಿಗೆ 34,200ರೂ., ನಿಷೇಧಿತ ವಾಹನ ನಿಲುಗಡೆಗಾಗಿ 1,620ಮಂದಿಗೆ 1,90,800ರೂ. ಸೇರಿ ಒಟ್ಟು 21,81,900ರೂ. ದಂಡ ವಿಧಿಸಲಾಗಿದೆ ಎಂದು ಸಂಚಾರಿ ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News