×
Ad

ಗ್ರಾಮದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ: ಗ್ರಾ.ಪಂ. ಪ್ರತಿನಿಧಿಗಳಿಗೆ ಮುಖ್ಯಮಂತ್ರಿ ಕಿವಿಮಾತು

Update: 2019-10-02 21:08 IST

ಬೆಂಗಳೂರು, ಅ. 2: ಚುನಾಯಿತ ಪ್ರತಿನಿಧಿಗಳ ಚಲನವಲನಗಳನ್ನು ಸಾಮಾನ್ಯ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಗ್ರಾಮದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಗ್ರಾ.ಪಂ. ಪ್ರತಿನಿಧಿಗಳಿಗೆ ಕಿವಿಮಾತು ಹೇಳಿದ್ದಾರೆ.

ಬುಧವಾರ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿಯ ಅಂಗವಾಗಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ 2018-19ನೆ ಸಾಲಿನ ‘ಗಾಂಧಿ ಗ್ರಾಮ ಪುರಸ್ಕಾರ’ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಹಳ್ಳಿಗಳು ಭಾರತದ ಆತ್ಮ, ಭಾರತದ ಭವಿಷ್ಯ ಹಳ್ಳಿಗಳಲ್ಲಿ ಅಡಗಿದೆ’ ಎಂದು ಗಾಂಧಿ ಹೇಳಿದ್ದರು. ಗಾಂಧಿ ಕನಸನ್ನು ಸಾಕಾರಗೊಳಿಸುವ ಪ್ರಯತ್ನವನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಮಾಡುತ್ತಿದೆ ಎಂದರು.

ಗ್ರಾಮ ಪಂಚಾಯತ್ ಗಳು ಭ್ರಷ್ಟಾಚಾರ ನಿಯಂತ್ರಣಕ್ಕೆ ಮುಂದಾಗುವ ಮೂಲಕ ಪಾರದರ್ಶಕತೆ ರೂಢಿಸಿಕೊಳ್ಳಬೇಕು. ಜತೆಗೆ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಆಸ್ಥೆ ವಹಿಸಬೇಕು ಎಂದು ಸಲಹೆ ಮಾಡಿದ ಅವರು, ಗ್ರಾಮದ ಸಂಪೂರ್ಣ ಅಭಿವೃದ್ಧಿಗೆ ಕರ್ನಾಟಕ ಬದ್ಧ ಎಂದು ನುಡಿದರು.

ಗಾಂಧಿ ಚಿಂತನೆ ಅನುಷ್ಠಾನಕ್ಕೆ ತರುವಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ಕೆರೆ, ಕಟ್ಟೆ ಪುನರುಜ್ಜೀವನ, ಚೆಕ್ ಡ್ಯಾಮ್ ನಿರ್ಮಾಣ ಮಾಡಲಾಗುತ್ತಿದೆ. ಪಂಚಾಯತ್ ರಾಜ್ಯ ವ್ಯವಸ್ಥೆ ಗಣಕೀಕರಣಗೊಳಿಸಲು ಸರಕಾರ ಬದ್ಧ. ಗ್ರಾ.ಪಂ. ಆಸ್ತಿಗಳ ಡಿಜಿಟಲೀಕರಣಕ್ಕೆ ಮುಂದಾಗುತ್ತಿದ್ದೇವೆ. ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಯಡಿಯೂರಪ್ಪ ಕರೆ ನೀಡಿದರು.

ಗ್ರಾಮಗಳ ನೈರ್ಮಲ್ಯ ಕಾಪಾಡುವುದರ ಜತೆಗೆ ಘನತ್ಯಾಜ್ಯ ವಿಲೇವಾರಿ, ಬಯಲು ಬಹಿರ್ದೆಸೆ ಮುಕ್ತ ಸ್ಥಾನ ಉಳಿಸಿಕೊಳ್ಳುವುದರ ಜತೆಗೆ ಕುಡಿಯುವ ನೀರು, ರಸ್ತೆ, ಚರಂಡಿ ಸೇರಿ ಗ್ರಾಮಗಳ ಮೂಲ ಸೌಲಭ್ಯಗಳ ಅಭಿವೃದ್ಧಿ ಹಾಗೂ ಆಸ್ತಿ ಸೃಜನೆಗೆ ಒತ್ತು ನೀಡಬೇಕೆಂದು ಅವರು ಸಲಹೆ ಮಾಡಿದರು.

‘ಉದ್ಯೋಗ ಖಾತ್ರಿ’ ನಿಲ್ಲಿಸುವ ಪ್ರಶ್ನೆಯೇ ಇಲ್ಲ: ಯಾವುದೇ ಕಾರಣಕ್ಕೂ ಉದ್ಯೋಗ ಖಾತ್ರಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ರಾಜ್ಯ ಸರಕಾರ 511 ಕೋಟಿ ರೂ.ಕೂಲಿ ಬಾಕಿಯ ಪೈಕಿ 341 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಇದುವರೆಗೆ ಕೇಂದ್ರ ಸರಕಾರದಿಂದ ಕೂಲಿ ಹಾಗೂ ಉಪಕರಣಗಳಿಗೆ 950ಕೋಟಿ ರೂ.ಗಳನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಣೆ ನೀಡಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಮಾಹಿತಿ ಇದ್ದ ಹಾಗಿಲ್ಲ. ಹೀಗಾಗಿ ಟ್ವಿಟ್ ಮಾಡಿ ಉದ್ಯೋಗ ಖಾತ್ರಿ ಯೋಜನೆ ನಿಲ್ಲಿಸುತ್ತಾರೆಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಉದ್ಯೋಗ ಖಾತ್ರಿ ಯೋಜನೆ ನಿಲ್ಲಿಸುವುದಿಲ್ಲ ಎಂದು ಪುನರುಚ್ಚರಿಸಿದರು.

ವ್ಯಾಯಾಮ ಶಾಲೆ: ಮೋದಿ ‘ಫಿಟ್ ಇಂಡಿಯಾ’ ಯೋಜನೆಯಡಿ ಎಲ್ಲ ಗ್ರಾಮ ಪಂಚಾಯತ್ ಗಳಲ್ಲಿ ತೆರೆದ ವ್ಯಾಯಾಮ ಶಾಲೆ ಆರಂಭಿಸಲಾಗುವುದು. ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಆಯ್ಕೆಯಾದ 2 ಮತ್ತು 3ನೆ ಸ್ಥಾನದಲ್ಲಿರುವ ಗ್ರಾ.ಪಂ.ಜನಪ್ರತಿನಿಧಿಗಳಿಗೆ ನವೆಂಬರ್ 2ಕ್ಕೆ ವಿಶೇಷ ತರಬೇತಿ ಶಿಬಿರ ನಡೆಸಲಾಗುವುದು. ಜಿ.ಪಂ.ಅಧ್ಯಕ್ಷರ ನೇತೃತ್ವದ ಟಾಸ್ಕ್‌ಫೋರ್ಸ್‌ಗೆ 30 ಕೋಟಿ ರೂ.ನೆರವು ನೀಡಲಾಗುವುದು ಎಂದು ಈಶ್ವರಪ್ಪ ಹೇಳಿದರು.

ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಜಿ.ಪುಟ್ಟಸ್ವಾಮಿ, ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ವಿಶ್ವನಾಥ್, ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ನಾಗಾಂಬಿಕ ದೇವಿ, ಹಿರಿಯ ಅಧಿಕಾರಿಗಳಾದ ಉಮಾಮಹದೇವನ್, ಪ್ರಿಯಾಂಕ ಮೇರಿ ಹಾಜರಿದ್ದರು.

‘ಶೌಚಾಲಯ ನಿರ್ಮಾಣ, ಸ್ವಚ್ಛತೆ, ತೆರಿಗೆ ಸಂಗ್ರಹ, ತ್ಯಾಜ್ಯ ವಿಲೇವಾರಿ, ಬಯಲು ಬಹಿರ್ದೆಸೆ ಮುಕ್ತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಾದರಿ ಸಾಧನೆಗೈದ 176 ಗ್ರಾ. ಪಂ.ಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಕೆ.ಎಸ್.ಈಶ್ವರಪ್ಪ ‘ಗಾಂಧಿ ಗ್ರಾಮ ಪುರಸ್ಕಾರ’ ಪ್ರಶಸ್ತಿ ಪ್ರದಾನ ಮಾಡಿದರು’

‘ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ನಿಲ್ಲಿಸುವ ಹುನ್ನಾರ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ಕಳೆದ ಮೂರು ತಿಂಗಳುಗಳಿಂದ ಯೋಜನೆಗೆ ಅನುದಾನ ನೀಡಿಲ್ಲ, ಪ್ರವಾಹದಿಂದ ಉದ್ಯೋಗವಿಲ್ಲದೆ ಕಂಗಾಲಾದವರಿಗೆ ಉದ್ಯೋಗ ನೀಡಿದ್ದರೆ ಅವರ ಬದುಕಿಗೆ ಆಸರೆಯಾಗುತ್ತಿತ್ತು. ಆದರೆ ಸರಕಾರ ಯೋಜನೆಯನ್ನೇ ಸ್ಥಗಿತಗೊಳಿಸುವ ಇರಾದೆ ಹೊಂದಿದಂತಿದೆ’

-ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News