ಜಾತಿ ಜನಗಣತಿ ವರದಿ ತಿರಸ್ಕಾರ ಖಂಡನೀಯ: ಡಾ.ಜಿ.ಪರಮೇಶ್ವರ್

Update: 2019-10-02 16:28 GMT

ಬೆಂಗಳೂರು, ಅ.2: ರಾಜ್ಯ ಬಿಜೆಪಿ ಸರಕಾರವು ಜಾತಿ ಜನಗಣತಿ ವರದಿಯನ್ನು ತಿರಸ್ಕರಿಸಲು ಮುಂದಾಗಿರುವ ಕ್ರಮ ಅತ್ಯಂತ ಖಂಡನಾರ್ಹ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಮಹಾತ್ಮಗಾಂಧೀಜಿ 150 ನೆ ಜಯಂತಿ ಅಂಗವಾಗಿ ನಗರದ ಸ್ವಾತಂತ್ರ ಉದ್ಯಾನವದಲ್ಲಿ ಕೆಪಿಸಿಸಿ ವತಿಯಿಂದ ಸಸಿಗಳನ್ನು ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರವು ಈ ತೀರ್ಮಾನ ಕೈಗೊಳ್ಳಲು ಮುಂದಾಗಿರುವುದು ಸರಿಯಲ್ಲ ಎಂದರು.

ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಜನರನ್ನು ಗುರುತಿಸಿ ಮೇಲಕ್ಕೆ ತರುವ ನಿಟ್ಟಿನಲ್ಲಿ ಹಿಂದಿನ ಸರಕಾರ ಸಮೀಕ್ಷೆ ನಡೆಸಿತ್ತು. ಆದರೆ ಬಿಜೆಪಿ ಸರಕಾರಕ್ಕೆ ಹಿಂದುಳಿದವರ ಅಭಿವೃದ್ಧಿ ಇಷ್ಟವಿಲ್ಲವೆಂದು ಭಾಸವಾಗುತ್ತಿದೆ ಎಂದು ಪರಮೇಶ್ವರ್ ಟೀಕಿಸಿದರು.

ಹಿಂದುಳಿದ ಸಮುದಾಯದವರು ಕಾಂಗ್ರೆಸ್ ಪರ ಎಂಬುದನ್ನು ಅವರು ಸಹಿಸದೇ ಈ ರೀತಿ ರಾಜಕೀಯ ದುರುದ್ದೇಶದಿಂದ ಈ ರೀತಿ ಸಮೀಕ್ಷಾ ವರದಿಯನ್ನು ತಿರಸ್ಕಾರ ಮಾಡಲು ಮುಂದಾಗಿದ್ದಾರೆ. ಬಿಜೆಪಿ ಹಿಂದಿನಿಂದಲೂ ಹಿಂದುಳಿದವರ ಬಗ್ಗೆ ನಿರ್ಲಕ್ಷ್ಯ ಭಾವನೆಯಿದೆ. ಈಗ ಅವರ ನೈಜ ಬಣ್ಣ ಬಯಲಾಗಿದೆ ಎಂದು ಅವರು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News