×
Ad

ಕೇಂದ್ರದಿಂದ ನೆರೆ ಪರಿಹಾರ ಬರದಿದ್ದರೆ ಸುಮ್ಮನಿರಲ್ಲ: ಸಚಿವ ಸಿ.ಟಿ.ರವಿ ಎಚ್ಚರಿಕೆ

Update: 2019-10-03 20:10 IST

ಬೆಂಗಳೂರು, ಅ.3: ರಾಜ್ಯದಲ್ಲಿ ಈಗಿರುವ ಪರಿಸ್ಥಿತಿಯಲ್ಲಿ ಒಂದು ವೇಳೆ ನಾವು ವಿರೋಧ ಪಕ್ಷದಲ್ಲಿ ಕೂತಿದ್ದರೆ, ಖಂಡಿತವಾಗಿಯೂ ಸುಮ್ಮನೆ ಕೂರುತ್ತಿರಲಿಲ್ಲ. ಅದೇ ರೀತಿ, ಈಗ ನಾವು ಆಡಳಿತದಲ್ಲಿದ್ದರೂ ಸಹ ಕೇಂದ್ರ ಸರಕಾರದಿಂದ ನೆರೆ ಪರಿಹಾರ ಸಿಗದಿದ್ದರೆ ಸುಮ್ಮನೆ ಕೂರುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಎಚ್ಚರಿಕೆ ನೀಡಿದರು.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರದಿಂದ ನೆರೆ ಪರಿಹಾರ ಬಂದೇ ಬರುತ್ತದೆ ಎಂಬ ವಿಶ್ವಾಸವಿದೆ. ಪರಿಹಾರ ಬಿಡುಗಡೆ ಮಾಡುವಲ್ಲಿ ಆಗುತ್ತಿರುವ ವಿಳಂಬಕ್ಕೆ ಕಾರಣವೇನು ಎಂಬುದುನ್ನು ತಿಳಿದುಕೊಳ್ಳುತ್ತೇನೆ ಎಂದರು.

ನಮ್ಮ ರಾಜ್ಯಕ್ಕೆ ಯಾವುದೇ ಕಾರಣಕ್ಕೂ ಕೇಂದ್ರ ಸರಕಾರದಿಂದ ಅನ್ಯಾಯವಾಗುವುದಿಲ್ಲ. ಒಂದು ವೇಳೆ ಅನ್ಯಾಯವಾದರೆ, ಅದರ ವಿರುದ್ಧ ಮೊದಲು ಧ್ವನಿ ಎತ್ತುವವನು ನಾನೇ ಆಗಿರುತ್ತೇನೆ. ನೆರೆ ಪರಿಹಾರದ ಸಂದರ್ಭದಲ್ಲಿ ತುರ್ತು ಪರಿಹಾರ ನೀಡುವುದನ್ನು ಕೇಂದ್ರ ಸರಕಾರ ಇತ್ತೀಚೆಗೆ ನಿಲ್ಲಿಸಿದೆ ಎಂದು ರವಿ ಹೇಳಿದರು.

ಕಳೆದ 10 ವರ್ಷಗಳಲ್ಲಿ ಕೇಂದ್ರ ಸರಕಾರ ಯಾವ ರೀತಿಯಲ್ಲಿ ವಿವಿಧ ರಾಜ್ಯಗಳಿಗೆ ಪರಿಹಾರ ನೀಡಿದೆ ಎಂಬುದನ್ನು ತಿಳಿದುಕೊಂಡಿದ್ದೇನೆ. ನಮ್ಮ ಭಾವನೆಗಳು ನಮ್ಮ ವ್ಯವಹಾರಗಳಿಗೆ ಮೀರಿದ್ದು. ಒಂದು ವೇಳೆ ನೆರೆ ಪರಿಹಾರದ ವಿಚಾರದಲ್ಲಿ ನಾನು ನೀಡಿರುವ ಹೇಳಿಕೆಯಲ್ಲಿ ಏನಾದರೂ ತಪ್ಪುಗಳಿದ್ದರೆ ಅದನ್ನು ನಾನು ಸರಿಪಡಿಸಿಕೊಳ್ಳುತ್ತೇನೆ ಎಂದು ಅವರು ಹೇಳಿದರು.

ದೇಶದ ಹತ್ತು ರಾಜ್ಯಗಳಲ್ಲಿ ನೆರೆ ಹಾವಳಿ ಸೃಷ್ಟಿಯಾಗಿದೆ. ಕೇಂದ್ರ ಸರಕಾರದಿಂದ ಯಾವ ರಾಜ್ಯಕ್ಕೂ ಪರಿಹಾರ ಬಿಡುಗಡೆಯಾಗಿಲ್ಲ. ಆದುದರಿಂದ, ಪರಿಹಾರ ನೀಡುವ ವಿಚಾರದಲ್ಲಿ ಕೇಂದ್ರ ಸರಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸುವುದು ಸರಿಯಲ್ಲ. ಇಲ್ಲಿ ತಾರತಮ್ಯದ ಪ್ರಶ್ನೆಯೇ ಇಲ್ಲ ಎಂದು ರವಿ ತಿಳಿಸಿದರು.

ನಮ್ಮ ಪಕ್ಷದ ರಾಷ್ಟ್ರೀಯ ನಾಯಕರ ಜೊತೆ ನಾನು ಮಾತನಾಡಿದ್ದೇನೆ. ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆದ ಬಳಿಕ ಪರಿಹಾರ ಬಿಡುಗಡೆ ಬಗ್ಗೆ ನಿರ್ಧರಿಸಲಾಗುತ್ತದೆ. ರಾಜ್ಯದ ಅಂಕಿ, ಅಂಶಗಳನ್ನು ಕ್ರೋಡೀಕರಿಸಲಾಗುತ್ತಿದೆ ಎಂದು ಅವರು ಹೇಳಿದರು.

ಬಿಹಾರದ ನೆರೆ ಸಂತ್ರಸ್ತರಿಗೆ ಸಾಂತ್ವನ ಹೇಳಿ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಟ್ವೀಟ್‌ಗೆ ರಾಜ್ಯದಲ್ಲಿ ವಿಪಕ್ಷಗಳು ಟೀಕಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರವಿ, ಪ್ರಧಾನಿಗೆ ನಮ್ಮ ರಾಜ್ಯದ ಬಗ್ಗೆ ಪ್ರೀತಿ ಇಲ್ಲ ಎಂದು ಭಾವಿಸುವುದು ತಪ್ಪು. ಗುಜರಾತ್‌ನಲ್ಲಿ ಸಂಭವಿಸಿದ ಪ್ರವಾಹದ ಬಗ್ಗೆಯೂ ಅವರು ಟ್ವೀಟ್ ಮಾಡಿಲ್ಲ ಎಂದರು.

ಸಿ.ಎಂ.ಇಬ್ರಾಹಿಮ್ ವಿಧೂಷಕ

ಕಾಂಗ್ರೆಸ್ ನಾಯಕ ಸಿ.ಎಂ.ಇಬ್ರಾಹಿಮ್ ಒಬ್ಬ ವಿಧೂಷಕ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾಗಾಂಧಿ ಬಗ್ಗೆ ಏನು ಹೇಳಿಕೆ ನೀಡಿದ್ದಾರೆ ಅನ್ನೋದು ಗೊತ್ತಿದೆ. ಗುಂಡೂರಾವ್, ರಾಮಕೃಷ್ಣ ಹೆಗಡೆ ಬಗ್ಗೆ ಅವರು ಮಾತನಾಡಿರುವುದನ್ನು ನೋಡಿದ್ದೇವೆ. ಅವರ ಪಕ್ಷದ ನಾಯಕರನ್ನು ಅವರು ಹಾಗೆಯೇ ಟೀಕೆಗಳನ್ನು ಮಾಡುತ್ತಾರೆ.

-ಸಿ.ಟಿ.ರವಿ, ಕನ್ನಡ ಮತ್ತು ಸಂಸ್ಕೃತಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News