ಕೇಂದ್ರದಿಂದ ಅನುದಾನ ಬಂದಿಲ್ಲ, ನಾವೇನು ಮಾಡೋಣ: ಸಚಿವ ಮಾಧುಸ್ವಾಮಿ

Update: 2019-10-03 17:08 GMT

ಬೆಂಗಳೂರು, ಅ. 3: ಕೇಂದ್ರ ಸರಕಾರದಿಂದ ನೆರೆ ಸಂತ್ರಸ್ತರಿಗೆ ಪರಿಹಾರದ ಅನುದಾನ ಇನ್ನೂ ಬಂದಿಲ್ಲ, ನಾವೇನು ಮಾಡೋಣ. ಅವರು ನಮಗೆ ಪರಿಹಾರ ನೀಡದೆ ಇನ್ಯಾರಿಗೆ ನೀಡುತ್ತಾರೆಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಜ್ಯ ಸರಕಾರ ತಲಾ 10 ಸಾವಿರ ರೂ.ನಂತೆ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಿದ್ದು, ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಲು ತಲಾ 1ಲಕ್ಷ ರೂ.ನೀಡಲಾಗಿದೆ. ಆ ಕಾರ್ಯಕ್ಕೆ 1ಸಾವಿರ ಕೋಟಿ ರೂ.ಬಿಡುಗಡೆ ಮಾಡಲಾಗಿದೆ ಎಂದರು.

ಎಸ್ಸಿಪಿ-ಟಿಎಸ್ಪಿ ಹಣ ವರ್ಗಾವಣೆ: ಹಿಂದಿನ ಸರಕಾರ ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ಎಸ್ಸಿಪಿ-ಟಿಎಸ್ಪಿ ಅನುದಾನದ ಪೈಕಿ 1,100 ಕೋಟಿ ರೂ.ಗಳನ್ನು ಅನ್ಯ ಕಾರ್ಯಕ್ಕೆ ಬಳಸಿಕೊಳ್ಳಲು ನಿರ್ಧರಿಸಿತ್ತು. ಇದೀಗ ನಮ್ಮ ಸರಕಾರ ಆ ಮೊತ್ತವನ್ನು ನೆರೆ ಪೀಡಿತ ಪ್ರದೇಶಗಳ ಎಸ್ಸಿ-ಎಸ್ಟಿ ವರ್ಗದವರಿಗೆ ಮನೆ ನಿರ್ಮಿಸಲು ವರ್ಗಾವಣೆ ಮಾಡಲಾಗಿದೆ ಎಂದರು.

ಲೋಕೋಪಯೋಗಿ ಇಲಾಖೆಯ 500 ಕೋಟಿ ರೂ.ಹಣವನ್ನು ರಸ್ತೆ ದುರಸ್ತಿಗೆ, ಸಣ್ಣ ನೀರಾವರಿ ಇಲಾಖೆ 300 ಕೋಟಿ ರೂ. ಹಾಗೂ ಹೆಚ್ಚುವರಿಯಾಗಿ 500 ಕೋಟಿ ರೂ.ಗಳನ್ನು ನೆರೆ ಪೀಡಿತ ಪ್ರದೇಶಗಳಲ್ಲಿ ಮೂಲ ಸೌಲಭ್ಯ ಅಭಿವೃದ್ಧಿಗೆ ವರ್ಗಾವಣೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ಕಲಾಪ ಸಮಿತಿ ಸಭೆಯಲ್ಲಿ ತೀರ್ಮಾನ: ಅಧಿವೇಶನ ಕಲಾಪ ವಿಸ್ತರಣೆ ಸಂಬಂಧ ಕಲಾಪ ಸಲಹಾ ಸಮಿತಿ(ಬಿಎಸ್ಸಿ) ಸಭೆಯಲ್ಲಿ ತೀರ್ಮಾನಿಸಲಾಗುವುದು. ಅಧಿವೇಶನ ವಿಸ್ತರಣೆ ಆಗಬೇಕೆಂಬುದು ಸರಕಾರ ಇಚ್ಛೆ ಇದೆ. ಇದೀಗ ಮೂರು ದಿನ ಕಲಾಪ ನಡೆಸಲು ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ ಎಂದರು.

ರಾಮನಗರ ಜಿಲ್ಲೆಯ ಕನಕಪುರದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ವೈದ್ಯಕೀಯ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ನೀಡುವ ಸಂಬಂಧ ಸಂಪುಟದಲ್ಲಿ ಚರ್ಚಿಸಿದ್ದು, ಈ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಮಾಧುಸ್ವಾಮಿ ಇದೇ ವೇಳೆ ತಿಳಿಸಿದರು.

ವಿಧೇಯಕ ಮಂಡೆ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ತಿದ್ದುಪಡಿ ವಿಧೇಯಕವನ್ನು ಅಕ್ಟೋಬರ್ 10ರಿಂದ ಆರಂಭಗೊಳ್ಳಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದರು.

ಚರ್ಚೆಯೇ ನಡೆದಿಲ್ಲ

ಜಾತಿವಾರು ಸಾಮಾಜಿಕ, ಆರ್ಥಿಕ ಸಮೀಕ್ಷೆಗೆ ಸಂಬಂಧಿಸಿದ ‘ಜಾತಿ ಗಣತಿ ವರದಿ’ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಈ ವರದಿ ಸರಕಾರ ಸ್ವೀಕರಿಸಿರುವ ಬಗ್ಗೆಯೂ ನನಗೆ ಯಾವುದೇ ರೀತಿಯ ಮಾಹಿತಿಯೂ ಇಲ್ಲ

-ಜೆ.ಸಿ.ಮಾಧುಸ್ವಾಮಿ, ಕಾನೂನು ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News