ನೆರೆ ಪರಿಹಾರ ನೀಡದಿದ್ದರೆ ಕೇಂದ್ರದ ವಿರುದ್ಧ 'ಕರ ನಿರಾಕರಣೆ ಚಳವಳಿ': ಪುಷ್ಪ ಅಮರನಾಥ್
ಬೆಂಗಳೂರು, ಅ.3: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿರುವಂತೆ ಮೂರು ದಿನಗಳಲ್ಲಿ ಕೇಂದ್ರ ಸರಕಾರ ನೆರೆ ಸಂತ್ರಸ್ತರಿಗೆ ಪರಿಹಾರ ನೀಡದಿದ್ದರೆ, ಕೇಂದ್ರದ ವಿರುದ್ಧ ಕರ ನಿರಾಕರಣೆ ಚಳುವಳಿ ಮಾಡಲಾಗುವುದು ಎಂದು ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಡಾ.ಬಿ.ಪುಷ್ಪ ಅಮರನಾಥ್ ಹೇಳಿದ್ದಾರೆ.
ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲೇ ತೆರಿಗೆ ಕಟ್ಟುವ ರಾಜ್ಯಗಳಲ್ಲಿ ನಮ್ಮ ರಾಜ್ಯ ನಾಲ್ಕನೆ ಸ್ಥಾನದಲ್ಲಿದೆ. ರಾಜ್ಯದಲ್ಲಿ ಮಳೆಯಿಂದಾಗಿ ಪ್ರವಾಹ ಬಂದು ಮನೆ, ಬೆಳೆ ಸೇರಿ ಲಕ್ಷಾಂತರ ಕೋಟಿ ರೂ.ನಷ್ಟವಾಗಿದೆ. ಆದರೆ, ಕೇಂದ್ರ ಸರಕಾರ ಇಲ್ಲಿಯವರೆಗೆ ಕೊಡಬೇಕಾದ ಪರಿಹಾರವನ್ನು ನೀಡದೆ, ಸತಾಯಿಸುತ್ತಿದೆ. ಮೂರು ದಿನಗಳಲ್ಲಿ ಪರಿಹಾರ ನೀಡದಿದ್ದರೆ ಕರ ನಿರಾಕರಣೆ ಚಳವಳಿ ಮಾಡಲಾಗುತ್ತದೆ ಎಂದು ಹೇಳಿದರು.
ನೆರೆ ಪ್ರವಾಹದ ಪರಿಹಾರಕ್ಕಾಗಿ 39 ಸಾವಿರ ಕೋಟಿ ರೂ.ನೀಡಬೇಕೆಂದು ರಾಜ್ಯ ಸರಕಾರ ಮನವಿ ಮಾಡಿಕೊಂಡಿದೆ, ಆದರೆ, ಬರೀ 10 ಸಾವಿರ ಕೋಟಿ ರೂ. ನೀಡಿ ರಾಜ್ಯದ ಜನತೆಗೆ ಅನ್ಯಾಯ ಎಸಗಿದ್ದಾರೆ. ನಾಲಾಯಕ್ ಸಂಸದ ಎಂದೇ ಗುರುತಿಸಿಕೊಂಡಿರುವ ಪ್ರತಾಪ್ ಸಿಂಹ ಅವರು ಪ್ರಧಾನಿ ಮೋದಿ ಅವರನ್ನು ಬೈದ್ರೈ ದೇವರನ್ನ ಬೈದಂತೆ ಎಂಬ ಹೇಳಿಕೆಯನ್ನು ನೀಡುತ್ತಾರೆ. ಬಿಎಸ್‌ವೈ ಅವರು ಪರಿಹಾರಕ್ಕಾಗಿ ಬೊಬ್ಬೆ ಹೊಡೆಯಬೇಡಿ ಎಂಬ ದುರಹಂಕಾರದ ಮಾತುಗಳನ್ನಾಡುತ್ತಾರೆ. ಇಂತಹ ಹೇಳಿಕೆಗಳಿಗೆ ತಮ್ಮಲ್ಲಿಯೇ ಕಡಿವಾಣ ಹಾಕಿಕೊಳ್ಳದಿದ್ದರೆ ರಾಜ್ಯದ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ತಿಳಿಸಿದರು.
ಮಹಾತ್ಮ ಗಾಂಧಿಜೀಯವರನ್ನು ಕೊಂದ ಗೋಡ್ಸೆ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಬಿಜೆಪಿ, ಅವನ ಹೆಸರಿನಲ್ಲಿಯೇ ದೇವಸ್ಥಾನ ಕಟ್ಟುವ ಸಾಹಸಕ್ಕೆ ಕೈಹಾಕಿದ್ದರು. ಸ್ವಚ್ಛ ಭಾರತ, ಬೇಟಿ ಬಚಾವೋ ಬೇಟಿ ಪಡಾವೋ ಎನ್ನುವಂತಹ ಹಲವು ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ. ಆದರೆ, ಈ ಯಾವ ಕಾರ್ಯಕ್ರಮಗಳೂ ಸರಿಯಾಗಿ ಜಾರಿಯಾಗಿಲ್ಲ ಎಂದು ಕಿಡಿಕಾರಿದರು.