ಪ್ರಧಾನಿ ಟೀಕಿಸುವವರನ್ನು ಜೈಲಿಗೆ ಅಟ್ಟಲಾಗುತ್ತಿದೆ: ರಾಹುಲ್ ಗಾಂಧಿ

Update: 2019-10-04 09:33 GMT

 ಹೊಸದಿಲ್ಲಿ, ಅ.4: ಯಾರಾದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಬಗ್ಗೆ ಏನಾದರೂ ಹೇಳಿದರೆ ಅವರನ್ನು ಜೈಲಿಗೆ ಅಟ್ಟಲಾಗುತ್ತದೆ ಎಂದು ದೇಶದ 50 ಗಣ್ಯರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿರುವುದನ್ನು ಉಲ್ಲೇಖಿಸಿ ಕೇಂದ್ರ ಸರಕಾರದ ವಿರುದ್ಧ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

   ‘‘ಯಾರೇ ಆಗಲಿ ಪ್ರಧಾನಮಂತ್ರಿ ವಿರುದ್ಧ ಮಾತನಾಡಿದರೆ, ಕೇಂದ್ರ ಸರಕಾರದ ವಿರುದ್ಧ ಧ್ವನಿ ಎತ್ತಿದರೆ, ಅಂತಹವರನ್ನು ಜೈಲಿಗೆ ಅಟ್ಟಲಾಗುತ್ತದೆ ಇಲ್ಲವೇ ಅವರ ಮೇಲೆ ದಾಳಿ ನಡೆಸಲಾಗುತ್ತದೆ. ಮಾಧ್ಯಮಗಳ ಬಾಯಿಯನ್ನು ಮುಚ್ಚಲಾಗುತ್ತಿದೆ. ದೇಶದಲ್ಲಿ ಏನು ನಡೆಯುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಇದು ರಹಸ್ಯವಾಗಿಯೇನು ಉಳಿದಿಲ್ಲ’’ ಎಂದು ಬಹಿರಂಗ ಪತ್ರ ಬರೆದಿದ್ದ ಗಣ್ಯರ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಕುರಿತಂತೆ ಕೇಳಿದ ಪ್ರಶ್ನೆಗೆ ಕಾಂಗ್ರೆಸ್ ಸಂಸದ ಪ್ರತಿಕ್ರಿಯಿಸಿದರು.

   ‘‘ದೇಶದೊಳಗೆ ಏನಾಗುತ್ತಿದೆ ಎಂದು ಇಡೀ ವಿಶ್ವಕ್ಕೇ ಗೊತ್ತಿದೆ. ನಾವು ಓರ್ವ ಸರ್ವಾಧಿಕಾರಿಯ ರಾಜ್ಯದತ್ತ ಸಾಗುತ್ತಿದ್ದೇವೆ. ಒಂದು ಕಡೆಯಲ್ಲಿ ದೇಶವನ್ನು ಓರ್ವ ವ್ಯಕ್ತಿಯೇ ಆಡಳಿತ ನಡೆಸಬೇಕು, ಒಂದೇ ಸಿದ್ದಾಂತವಿರಬೇಕು ಹಾಗೂ ಎಲ್ಲರೂ ಬಾಯಿ ಮುಚ್ಚಿಕೊಂಡಿರಬೇಕೆಂಬ ಚಿಂತನೆಯ ಪಕ್ಷವಿದೆ. ಮತ್ತೊಂದು ಕಡೆಯಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಇತರ ವಿಪಕ್ಷಗಳು ಇದನ್ನು ಖಂಡಿಸುತ್ತಿವೆ. ನಮ್ಮ ದೇಶ ಹಲವು ವಿಭಿನ್ನ ಅಭಿಪ್ರಾಯವನ್ನು, ವಿವಿಧ ಭಾಷೆಗಳನ್ನು, ಸಂಸ್ಕೃತಿಯನ್ನು, ವಿವಿಧ ರೀತಿಯ ಅಭಿವೃಕ್ತಿಯನ್ನು ಹೊಂದಿದೆ. ಅಂತಹ ಧ್ವನಿಯನ್ನು ಯಾರಿಂದಲೂ ಅಡಗಿಸಲು ಸಾಧ್ಯವಿಲ್ಲ. ಇದು ದೇಶದಲ್ಲಿ ನಡೆಯುತ್ತಿರುವ ಪ್ರಮುಖ ಯುದ್ಧವಾಗಿದೆ’’ ಎಂದು ವಯನಾಡ್ ಸಂಸದ ರಾಹುಲ್ ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News