ಸುಳ್ಯದ ಯುವಕ ಫಯಾಝ್ ಗೆ ಒಲಿದ 'ಬಿಗ್ ಟಿಕೆಟ್ ರ‍್ಯಾಫೆಲ್' ನ 23 ಕೋಟಿ ರೂ. ಬಹುಮಾನ

Update: 2019-10-04 10:23 GMT

ಅಬುಧಾಬಿ: ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಜೆ ನಡೆದ ಬಿಗ್ ಟಿಕೆಟ್ ರ್ಯಾಫೆಲ್ ಡ್ರಾದಲ್ಲಿ 12 ಮಿಲಿಯನ್ ದಿರ್ಹಂ (ಅಂದಾಜು ರೂ. 23 ಕೋಟಿ)  ಬಹುಮಾನವನ್ನು ಕರ್ನಾಟಕದ ಸುಳ್ಯ ಮೂಲದ ಯುವಕ ಮುಹಮ್ಮದ್ ಫಯಾಝ್ (24) ಗೆದ್ದಿದ್ದಾರೆ.  ಮುಂಬೈಯಲ್ಲಿ ಅಕೌಂಟೆಂಟ್ ವೃತ್ತಿಯಲ್ಲಿರುವ ಫಯಾಝ್ ಇಲ್ಲಿಯವರೆಗೆ ಒಮ್ಮೆ ಕೂಡ ಯುಎಇಗೆ ಭೇಟಿ ನೀಡಿದವರಲ್ಲ. 

ಹೆತ್ತವರನ್ನು ಸಣ್ಣ ಪ್ರಾಯದಲ್ಲಿಯೇ ಕಳೆದುಕೊಂಡ ಫಯಾಝ್ ತನ್ನ ಇಬ್ಬರು ಸೋದರಿಯರು ಹಾಗೂ ಸೋದರನನ್ನು ಸಲಹಲು ಮುಂಬೈಗೆ ಉದ್ಯೋಗಕ್ಕೆಂದು ತೆರಳಿದವರು. ಕಳೆದ ಆರು ತಿಂಗಳಿಂದೀಚೆಗೆ ಅವರು ತಮ್ಮ ರೂಮ್ ಮೇಟ್ ಸಲಹೆ ಮೇರೆಗೆ ಆತನ ಜತೆ ಸೇರಿ ಬಿಗ್ ಟಿಕೆಟ್ ಖರೀದಿಸಲು ಆರಂಭಿಸಿದ್ದರು.

"ಇಬ್ಬರು ಹೆತ್ತವರೂ ಮೂತ್ರ ಪಿಂಡದ ಕಾಯಿಲೆಯಿಂದ ಮೃತಪಟ್ಟಿದ್ದರು. ತಂದೆ ಬಹಳ ಕಾಲ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದರು ಕಿಡ್ನಿ ವೈಫಲ್ಯದಿಂದ 12 ವರ್ಷ ಕಾಲ ಅವರು ಕಷ್ಟ ಪಟ್ಟಿದ್ದರು. ನನ್ನ ಹಿರಿಯ ಸೋದರಿಗೆ ವಿವಾಹವಾಗಿದೆ. ಮನೆ ನಿರ್ಮಿಸಲೆಂದು ನಮ್ಮ ಒಡೆತನದಲ್ಲಿದ್ದ ಭೂಮಿಯ ತುಂಡನ್ನು ಮಾರಿದ್ದೆವು. ಮನೆಯಿನ್ನೂ ಪೂರ್ತಿಗೊಂಡಿಲ್ಲ,''ಎಂದು ಫಯಾಝ್ ಹೇಳುತ್ತಾರೆ.

ಈ ಬಾರಿ ಅವರು ಕೊನೇ ಕ್ಷಣದಲ್ಲಿ ಸೆಪ್ಟೆಂಬರ್ ಕೊನೆಯ ದಿನದಂದು ಟಿಕೆಟ್ ಖರೀದಿಸಿದ್ದರು. ಬಿಗ್ ಟಿಕೆಟ್ ಡ್ರಾ ಸಂಸ್ಥೆಯ ರಿಚರ್ಡ್ ನಾಲ್ಕು ಬಾರಿ ಫಯಾಝ್‍ಗೆ ಕರೆ ಮಾಡಿದಾಗಲೂ ಅವರ ಸಂಖ್ಯೆ ಬ್ಯುಸಿಯಾಗಿತ್ತು. ಕೊನೆಗೂ ಫೋನ್  ಕನೆಕ್ಟ್ ಆದಾಗ ಫಯಾಝ್ ಆನಂದಕ್ಕೆ ಪಾರವೇ  ಇರಲಿಲ್ಲ. ತಮಗೆ ದೊರೆಯುವ ಹಣದಿಂದ ತಾವೀಗಾಗಲೇ ಮಾರಾಟ ಮಾಡಿದ ಜಮೀನನ್ನು ಮತ್ತೆ ಪಡೆದು ಮನೆ ನಿರ್ಮಾಣ ಪೂರ್ಣಗೊಳಿಸುವ ಉದ್ದೇಶ ಅವರಿಗಿದೆ. ಮುಂದಿನ ತಿಂಗಳು ಚೆಕ್ ಪಡೆಯಲು ಯುಎಇಗೆ ತೆರಳುವುದಾಗಿ ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News