ರಾಜ್ಯದ ವರದಿ ವಾಪಸ್ ಕಳುಹಿಸಿದ ಕೇಂದ್ರ ನಡೆ ಖಂಡನೀಯ: ಮಾಜಿ ಪ್ರಧಾನಿ ದೇವೇಗೌಡ

Update: 2019-10-04 14:23 GMT

ಬೆಂಗಳೂರು, ಅ.4: ನೆರೆ ಹಾವಳಿಯಿಂದಾಗಿ ರಾಜ್ಯದಲ್ಲಿ ಉಂಟಾಗಿರುವ ನಷ್ಟದ ವರದಿಯನ್ನು ಸರಿಯಾಗಿ ಮಾಡಿಲ್ಲ ಎಂದು ಕೇಂದ್ರ ಸರಕಾರ ವಾಪಸ್ ಕಳುಹಿಸಿದೆ. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ಘಟನೆ ನಡೆದಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಕ್ರೊಶ ವ್ಯಕ್ತಪಡಿಸಿದರು.

ಶುಕ್ರವಾರ ನಗರದ ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ಕಚೇರಿ(ಜೆ.ಪಿ.ಭವನ)ಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಷ್ಟದ ಅಂದಾಜನ್ನು ಒಪ್ಪಲು ಸಾಧ್ಯವಿಲ್ಲ, ಮತ್ತೊಮ್ಮೆ ವರದಿ ಸಂಗ್ರಹಿಸಿ ಕಳುಹಿಸಿ ಎಂದು ಕೇಂದ್ರ ಸರಕಾರ ಹೇಳಿರುವುದು ಖಂಡನೀಯ ಎಂದರು.

ಬಿಹಾರದಿಂದ ಕೇರಳದವರೆಗೆ ಎಲ್ಲ ರಾಜ್ಯಗಳಲ್ಲೂ ಭೀಕರವಾದ ನೆರೆ ಆಗಿದೆ. ಒಂದೊಂದು ರಾಜ್ಯದಲ್ಲಿಯೂ ನಿರೀಕ್ಷೆ ಮೀರಿದ ಹಾನಿಯಾಗಿದೆ. ರಾಜ್ಯದ ಬಿಜೆಪಿ ಸರಕಾರವೇ ಕೊಟ್ಟ ವರದಿಯನ್ನು ಕೇಂದ್ರದ ಬಿಜೆಪಿ ಸರಕಾರ ವಾಪಸ್ ಕಳುಹಿಸಿದೆ. ಈ ಪರಿಸ್ಥಿತಿಗೆ ಯಾರು ಹೊಣೆ, ಕೇಂದ್ರ ಸರಕಾರಕ್ಕೆ ಜವಾಬ್ದಾರಿ ಇಲ್ಲವೇ ಎಂದು ಅವರು ಪ್ರಶ್ನಿಸಿದರು.

ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಇರುವುದು ನನಗೆ ಗೊತ್ತಿದೆ. ರಾಜ್ಯದ ಅನಾಹುತದ ಬಗ್ಗೆ ವಿಸ್ತೃತವಾಗಿ ಮತ್ತೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯುತ್ತೇನೆ. 38 ಸಾವಿರ ಕೋಟಿ ರೂ.ಸರಿಯಾಗಿಲ್ಲ ಅಂದರೆ, ಕನಿಷ್ಠ 10 ಸಾವಿರ ಕೋಟಿ ರೂ.ಮಧ್ಯಂತರ ಪರಿಹಾರವನ್ನಾದರೂ ಕೊಡಲಿ ಎಂದು ದೇವೇಗೌಡ ಆಗ್ರಹಿಸಿದರು.

ನಾವು ಏನು ಮಾಡಿದರೂ ನಡೆಯುತ್ತೇ ಅನ್ನೋ ಧೋರಣೆ ಕೇಂದ್ರ ಸರಕಾರದ್ದು. ರಾಜ್ಯದ ಜನ ಮುಂದೆಯೂ ನಮಗೆ ಮತ ಕೊಡುತ್ತಾರೆ ಅನ್ನೋ ಭ್ರಮಾ ಲೋಕದಲ್ಲಿ ಬಿಜೆಪಿಯವರಿದ್ದಾರೆ. ಉಪ ಚುನಾವಣೆ ಬರುತ್ತಿದೆ. ಒಂದು ಕಡೆ ಜನ ಸಾಯುತ್ತಿದ್ದಾರೆ. ಮತ್ತೊಂದು ಕಡೆ ಯಾರು ಸ್ಪರ್ಧೆ ಮಾಡುತ್ತಾರೆ ಅಂತ ಅಭ್ಯರ್ಥಿಗಳನ್ನು ಹುಡುಕುತ್ತಿದ್ದಾರೆ ಎಂದು ಅವರು ಕಿಡಿಗಾರಿದರು.

ನಮ್ಮ ಶಾಸಕರಿಗೆ ಒಂದು ತಿಂಗಳ ಸಂಬಳ ಕೊಡಲು ನಾನೇ ಹೇಳಿದ್ದೆ. ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ರಚನೆ ಮಾಡುವ ಮುನ್ನ ಒಬ್ಬರೇ ಓಡಾಡಿದ್ದಾರೆ. ಅವರ ಆಡಳಿತ ಅಥವಾ ಭ್ರಷ್ಟಾಚಾರದ ಬಗ್ಗೆ ನಾನು ಮಾತನಾಡುವುದಿಲ್ಲ, ಅದರ ಅವಶ್ಯಕತೆಯೂ ಇಲ್ಲ ಎಂದು ದೇವೇಗೌಡ ಹೇಳಿದರು.

ನೆರೆ ಪರಿಸ್ಥಿತಿ ನಿಭಾಯಿಸಲು ಆಗುವುದಿಲ್ಲವೇ ಎಂದು ಲೋಕಸಭಾ ಸದಸ್ಯರ ಬಗ್ಗೆ ಕೇಂದ್ರ ಸಚಿವ ಸಂಪುಟದಲ್ಲಿ ಕಠಿಣವಾದ ಶಬ್ದದಿಂದ ಆಪಾದನೆ ಮಾಡಿದ್ದಾರೆ. ಈಗ ನಾನು ಲೋಕಸಭೆಯಲ್ಲಿ ಇಲ್ಲ, ಮಲ್ಲಿಕಾರ್ಜುನ ಖರ್ಗೆಯೂ ಇಲ್ಲ. ಸಂಸತ್ತಿನ ಒಳಗೆ ಇದ್ದು ಹೋರಾಟ ಮಾಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ವಿಧಾನಸಭೆಯಲ್ಲಿ ನಮ್ಮದು ಎರಡನೇ ವಿರೋಧ ಪಕ್ಷ, ಎಚ್.ಡಿ.ಕುಮಾರಸ್ವಾಮಿಗೆ ಇನ್ನು ಹೋರಾಟ ಮಾಡುವ ಶಕ್ತಿಯಿದೆ. ಅ.10ರಂದು ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಎಲ್ಲ ಕಾರ್ಯಕರ್ತರು, ಸಂಘ ಸಂಸ್ಥೆಗಳು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡುತ್ತೇನೆ. ಪಾದಯಾತ್ರೆಯಲ್ಲಿ ನಾನೂ ಭಾಗವಹಿಸುತ್ತೇನೆ, ಶಾಂತಿಯುತವಾಗಿ ಹೋರಾಟ ಮಾಡುತ್ತೇವೆ ಎಂದು ದೇವೇಗೌಡ ಹೇಳಿದರು.

ಅಧಿವೇಶನದಲ್ಲಿ ಧನ ವಿನಿಯೋಗ ವಿಧೇಯಕ ಅಂಗೀಕಾರಕ್ಕೆ ನಮ್ಮ ತಕರಾರು ಇಲ್ಲ. ಆದರೆ, ವಿಷಯಗಳ ಬಗ್ಗೆ ಸದನದಲ್ಲಿ ಚರ್ಚೆ ಆಗಬೇಕಿದೆ. ಬಿಜೆಪಿ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇರುವುದು ಬಹಿರಂಗವಾಗಿದೆ. ಪ್ರಧಾನಿ ನರೇಂದ್ರ ಮೋದಿಗಾಗಿ ನಮ್ಮ ಯುವಕರು ಸ್ವರ್ಗವೇ ಭೂಮಿಗೆ ಇಳಿದು ಬರೋ ರೀತಿಯಲ್ಲಿ ‘ಮೋದಿ, ಮೋದಿ’ ಎಂದು ಘೋಷಣೆಗಳನ್ನು ಕೂಗುತ್ತಿದ್ದರು ಎಂದು ಅವರು ತಿಳಿಸಿದರು.

ಈ ಯುವಕರಿಗಾಗಿ ಮೋದಿ ಉದ್ಯೋಗ ಸೃಷ್ಟಿ ಮಾಡಿದ್ದಾರಾ? ಸಾರ್ವಜನಿಕ ಸ್ವಾಮ್ಯದ ಬಿಎಸ್ಸೆನ್ನೆಲ್ ಮುಚ್ಚುತ್ತಿದ್ದಾರೆ. ಎಚ್‌ಎಎಲ್ ನೌಕರರು ಪ್ರತಿಭಟನೆ ಮಾಡುತ್ತಿದ್ದಾರೆ. ಇದೇನಾ ಮೋದಿ ಮಾಡಿರುವ ಸಾಧನೆ ಎಂದು ದೇವೇಗೌಡ ಟೀಕಿಸಿದರು.

ನವೆಂಬರ್‌ನಲ್ಲಿ ಸಂಸತ್ ಅಧಿವೇಶನ ಆರಂಭವಾಗುತ್ತದೆ. ವಾಜಪೇಯಿ ಆಡಳಿತಾವಧಿಯಲ್ಲಿ ನಾನು ಸಂಸತ್ ಎದುರು ಹೋರಾಟ ಮಾಡಿದ್ದೆ. ಒಬ್ಬ ಮಾಜಿ ಪ್ರಧಾನಿಯಾಗಿ ಕಿಂಚಿತ್ತೂ ಧ್ವನಿ ಇಲ್ಲದಿದ್ದರೆ ತಪ್ಪಾಗುತ್ತದೆ ಎಂದು ಅವರು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರಕಾರದ ನಡುವಿನ ಕೊಂಡಿ ಕಳಚಿದೆಯಾ? ಅನ್ನೋ ಪ್ರಶ್ನೆ ಕಾಡುತ್ತಿದೆ. ವಿದೇಶಿ ನೆಲದಲ್ಲಿ ನಿಂತು ನೆಹರು ಅವರನ್ನು ಬೈದರೆ ಏನು ಪ್ರಯೋಜನ? ಅಂದಿನ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿ ಏನಿತ್ತೋ? ಎಂದು ದೇವೇಗೌಡ ಹೇಳಿದರು.

ರಾಜ್ಯದ ಬಿಜೆಪಿ ಸಂಸದರಿಗೆ ಹೆದರಿಕೆ ಶುರುವಾಗಿದೆ. ಮೋದಿ ಎದುರು ಮಾತನಾಡುವುದು ಶಿಸ್ತು ಅಲ್ಲ ಎಂಬ ಭಯ ಅವರಿಗೆ ಕಾಡುತ್ತಿದೆ. ಚಕ್ರವರ್ತಿ ಸೂಲಿಬೆಲೆ ಉತ್ತಮವಾಗಿ ನೆರೆ ಪರಿಹಾರದ ವಿಷಯದಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ದೇವೇಗೌಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News