ಬೃಹತ್ ಕೈಗಾರಿಕೆಗೆ ಒತ್ತು ನೀಡಿ ತಪ್ಪು ಮಾಡಿದ್ದೇವೆ: ಎಚ್.ಎಸ್.ದೊರೆಸ್ವಾಮಿ

Update: 2019-10-04 15:02 GMT

ಬೆಂಗಳೂರು, ಅ.4: ಪ್ರೇಮದ ಪ್ರತೀಕದ ಯಂತ್ರಗಳು ಎಷ್ಟು ಬೇಕಾದರೂ ಬರಲಿ. ಆದರೆ ಮಾರಕ ಯಂತ್ರಗಳು ಬೇಡ. ಈಗಾಗಲೇ ತುಂಬಾ ನಿಧಾನವಾಗಿದೆ. ನಾವೆಲ್ಲಾ ಬೃಹತ್ ಕೈಗಾರಿಕೆಗಳಿಗೆ ಅತಿಹೆಚ್ಚು ಒಲವನ್ನು ತೋರಿಸಿ ತಪ್ಪುಮಾಡಿದ್ದೇವೆ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅಭಿಪ್ರಾಯಿಸಿದ್ದಾರೆ.

ಗ್ರಾಮ ಸೇವಾ ಸಂಘ ನಡೆಸುತ್ತಿರುವ ಪವಿತ್ರ ಆರ್ಥಿಕತೆಗಾಗಿ ಸತ್ಯಾಗ್ರಹದ ಮೂರನೇ ದಿನದ ಸರಣಿ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಕಾರ್ಮಿಕರ ಚಳುವಳಿಯನ್ನು ಗೆಲ್ಲಿಸಬೇಕಾದ ಕಾಲವಿದು. ಹೀಗಾಗಿ ಪರಿಸರ ಸ್ನೇಹಿಯಾದ ಪವಿತ್ರ ಆರ್ಥಿಕ ಸತ್ಯಾಗ್ರಹದ ಜೊತೆಗೆ ಸದಾ ಇದ್ದೇನೆ ಎಂದು ತಿಳಿಸಿದರು.

ರಂಗಕರ್ಮಿ ಪ್ರಸನ್ನ ಮಾತನಾಡಿ, ನಮ್ಮ ಬೇಡಿಕೆ ಸರಳವಿದೆ, ಕೆಲಸ ಕೊಡಿ, ಕೆಲಸ ಕೊಡಿ, ಹಸಿರನ್ನು ಹಸಿರಾಗಿ ಉಳಿಸಬಲ್ಲ ಕೆಲಸ ಕೊಡಿ. ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಅಥವಾ ಗಾಂಧೀಜಿಯವರ ಆರ್ಥಿಕತೆ ಎಂದು ಯಾವುದನ್ನು ಕರೆಯುತ್ತೇವೋ, ಅದನ್ನು ನಾವು ಪವಿತ್ರ ಆರ್ಥಿಕತೆ ಎನ್ನುತ್ತಿದ್ದೇವೆ ಎಂದರು.

ಗ್ರಾಮ ಸ್ವರಾಜ್ಯದ ಆಚೆಗೆ ನಿಲ್ಲುವ ಅನೇಕ ನಗರ ಕೈಗಾರಿಕೆಗಳಲ್ಲೂ ಕೂಡಾ ವಿಪರೀತ ಕೆಲಸ ನಷ್ಟ ಆಗುತ್ತಿದೆ. ಈ ಸಂಘಟಿತ ವಲಯ ಎಂದು ನಾವು ಕರೆಯುತ್ತಿರುವ ಕೆಲಸದ ಜಾಗಗಳಲ್ಲೂ ದಿನಕ್ಕೆ ಮೂರು ಲಕ್ಷ ಮಂದಿ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಈ ರಾಕ್ಷಸ ಆರ್ಥಿಕತೆಯ ರೋಗ ಹೀಗೆ ದಿನದಿಂದ ದಿನಕ್ಕೆ ಗ್ರಾಮಗಳಿಂದ ಬೆಳೆದು ನಗರಗಳಿಗೂ ವ್ಯಾಪಿಸಿದೆ. ಆದ್ದರಿಂದ ಪವಿತ್ರ ಆರ್ಥಿಕತೆ ಎಂಬ ಹೊಸ ಘೋಷಣೆಯೊಂದಿಗೆ ಈ ಹೋರಾಟವನ್ನು ಮಾಡುತ್ತಾ ಇದ್ದೇವೆ ಎಂದು ಅವರು ತಿಳಿಸಿದರು.

ಗ್ರಾಮ ಸೇವಾ ಸಂಘದ ಮಾರ್ಗದರ್ಶಕ ಚೊಕ್ಕಲಿಂಗಮ್ ಮುತ್ತಯ್ಯ, ಹರಿಹರನ್, ಎಮ್.ಸಿ.ನರೇಂದ್ರ ಹಾಗೂ ಹಾಡುಗಾರ ನಾದ ಮಣಿನಾಲ್ಕೂರು ಅವರು ಮೂರನೇ ದಿನದ ಉಪವಾಸ ಸತ್ಯಾಗ್ರಹವನ್ನು ಮುನ್ನಡೆಸುತ್ತಿದ್ದಾರೆ. ಕೋಲಾರ ಚಿಂತಾಮಣಿಯ ಬೇರು ಬೆವರು ಕಲಾ ಬಳಗ ತಮ್ಮ 59ನೇ ಹಸಿರುಪದ ಹಾಡುಗಳನ್ನು ಹಾಡುವುದರ ಮೂಲಕ ಸತ್ಯಾಗ್ರಹವನ್ನು ಬೆಂಬಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News