ಎಲ್ಗರ್, ಡಿಕಾಕ್ ಶತಕ; ಹರಿಣಪಡೆ ಪ್ರತಿಹೋರಾಟ

Update: 2019-10-05 02:16 GMT

ಮೊದಲ ಟೆಸ್ಟ್

ವಿಶಾಖಪಟ್ಟಣ, ಅ.4: ಡಿಯನ್ ಎಲ್ಗರ್ ಹಾಗೂ ಕ್ವಿಂಟನ್ ಡಿಕಾಕ್ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಭಾರತ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರತಿ ಹೋರಾಟದ ಹಾದಿ ಹಿಡಿದಿದೆ. ಭಾರತದ ಮೊದಲ ಇನಿಂಗ್ಸ್ ಮೊತ್ತ 502ಕ್ಕೆ ಉತ್ತರವಾಗಿ ಮೂರನೇ ದಿನದಾಟದಂತ್ಯಕ್ಕೆ 8 ವಿಕೆಟ್‌ಗಳ ನಷ್ಟಕ್ಕೆ 385 ರನ್ ಗಳಿಸಿದೆ.

ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಡಿಕಾಕ್ 111 ರನ್(163 ಎಸೆತ, 16 ಬೌಂಡರಿ, 2 ಸಿಕ್ಸರ್)ಗಳಿಸಿದ್ದಲ್ಲದೆ ಆರಂಭಿಕ ಬ್ಯಾಟ್ಸ್ ಮನ್ ಎಲ್ಗರ್(160, 287 ಎಸೆತ, 18 ಬೌಂಡರಿ, 4 ಸಿಕ್ಸರ್)ಅವರೊಂದಿಗೆ 6ನೇ ವಿಕೆಟ್ ಜೊತೆಯಾಟದಲ್ಲಿ 164 ರನ್ ಸೇರಿಸಿದರು. ಚಾಂಪಿಯನ್ ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 27ನೇ ಬಾರಿ ಐದು ವಿಕೆಟ್ ಗೊಂಚಲು ಪಡೆದು ಹರಿಣ ಪಡೆಯ ಬ್ಯಾಟಿಂಗ್‌ಗೆ ಕಡಿವಾಣ ಹಾಕಿದರು. ಅಶ್ವಿನ್ 2017ರ ಆಗಸ್ಟ್ ನ ಬಳಿಕ ಮೊದಲ ಬಾರಿ ಐದು ವಿಕೆಟ್‌ಗಳನ್ನು (5-128)ಕಬಳಿಸಿದರು. ಮೂರನೇ ದಿನದಾಟದಂತ್ಯಕ್ಕೆ ದಕ್ಷಿಣ ಆಫ್ರಿಕಾ 117 ರನ್ ಹಿನ್ನಡೆಯಲ್ಲಿದ್ದು, ಚೊಚ್ಚಲ ಪಂದ್ಯ ಆಡುತ್ತಿರುವ ಸೆನುರಾನ್ ಮುತ್ತುಸ್ವಾಮಿ(12) ಹಾಗೂ ಕೇಶವ ಮಹಾರಾಜ್(ಔಟಾಗದೆ 03)ಕ್ರೀಸ್ ಕಾಯ್ದುಕೊಂಡಿದ್ದಾರೆ. ಮೊದಲ ದಿನದಾಟದಲ್ಲಿ ಮಳೆಯಿಂದಾಗಿ ಕಡಿತಗೊಂಡಿದ್ದ ಓವರ್‌ಗಳನ್ನು ಮೂರನೇ ದಿನವಾದ ಇಂದು 98 ಓವರ್‌ಗಳನ್ನು ಆಡುವ ಮೂಲಕ ಕೊರತೆ ತುಂಬುವ ಪ್ರಯತ್ನ ನಡೆಸಲಾಯಿತು.

ಡಿಕಾಕ್ ಕೊನೆಯ ಸೆಶನ್‌ನಲ್ಲಿ ಅಶ್ವಿನ್ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಐದನೇ ಟೆಸ್ಟ್ ಶತಕ ಪೂರೈಸಿದರು. ಡಿಕಾಕ್ 111 ರನ್ ಗಳಿಸಿ ಅಶ್ವಿನ್‌ಗೆ ಕ್ಲೀನ್‌ಬೌಲ್ಡಾದರು. 2ನೇ ದಿನವಾದ ಗುರುವಾರ ಏಡೆನ್ ಮರ್ಕರಮ್(5)ಹಾಗೂ ಬ್ರೂನ್(4)ವಿಕೆಟನ್ನು ಪಡೆದಿದ್ದ ಅಶ್ವಿನ್ ಹರಿಣ ಪಡೆಗೆ ಆರಂಭಿಕ ಆಘಾತ ನೀಡಿದ್ದರು. ಶುಕ್ರವಾರ ನಾಯಕ ಎಫ್‌ಡು ಪ್ಲೆಸಿಸ್(55, 103 ಎಸೆತ, 8ಬೌಂಡರಿ, 1 ಸಿಕ್ಸರ್)ಹಾಗೂ ವೆರ್ನಾನ್ ಫಿಲ್ಯಾಂಡರ್(0)ವಿಕೆಟನ್ನು ಉರುಳಿಸಿದ ಅಶ್ವಿನ್ ಐದು ವಿಕೆಟ್ ಗೊಂಚಲು ಪಡೆದರು.

 ದಕ್ಷಿಣ ಆಫ್ರಿಕಾ ಇಂದು 63 ರನ್‌ಗೆ ನಾಲ್ಕು ವಿಕೆಟ್ ಕಳೆದುಕೊಂಡಿತು. ಆಗ ನಾಯಕ ಎಫ್‌ಡು ಪ್ಲೆಸಿಸ್ ಅವರೊಂದಿಗೆ 5ನೇ ವಿಕೆಟ್ ಜೊತೆಯಾಟದಲ್ಲಿ 115 ರನ್ ಸೇರಿಸಿದ ಎಲ್ಗರ್ ಎದುರಾಳಿ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದರು. ಭಾರತದ ಇನ್ನೋರ್ವ ಸ್ಪಿನ್ನರ್ ರವೀಂದ್ರ ಜಡೇಜ ಅಂತಿಮ ಸೆಶನ್‌ನಲ್ಲಿ ಎಲ್ಗರ್ ವಿಕೆಟನ್ನು ಉರುಳಿಸಿ ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್ ಪೂರೈಸಿದ ಸಾಧನೆ ಮಾಡಿದರು.

ದಕ್ಷಿಣ ಆಫ್ರಿಕಾ 3 ವಿಕೆಟ್‌ಗಳ ನಷ್ಟಕ್ಕೆ 39 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿತು. ಟೆಂಬಾ ಬವುಮಾ(18) ವಿಕೆಟನ್ನು ಬೇಗನೆ ಉರುಳಿಸಿದ ವೇಗದ ಬೌಲರ್ ಇಶಾಂತ್ ಶರ್ಮಾ ಆಫ್ರಿಕಾಕ್ಕೆ ಶಾಕ್ ನೀಡಿದರು.

ಎಲ್ಗರ್ 74 ರನ್ ಗಳಿಸಿದ್ದಾಗ ಜೀವದಾನ ಪಡೆದರು. ಜಡೇಜ ಬೌಲಿಂಗ್‌ನಲ್ಲಿ ವಿಕೆಟ್‌ಕೀಪರ್ ವೃದ್ಧಿಮಾನ್ ಸಹಾ ಕ್ಯಾಚ್ ಕೈಚೆಲ್ಲಿದರು. ಜೀವದಾನದ ಲಾಭ ಪಡೆದ ಎಲ್ಗರ್ 99.3ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News